ಪೊಲೀಸರಿಂದ ವಾಹನಗಳ ತಪಾಸಣೆ: 20 ಸಾವಿರ ರೂ. ದಂಡ: 40 ವಾಹನಗಳಿಗೆ ನೋಟಿಸ್
ಮಂಗಳೂರು, ಜೂ.22: ತ್ರಾಸಿಯಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ 8 ಶಾಲಾ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದ.ಕ. ಜಿಲ್ಲೆಯ ಹಲವೆಡೆ ಇಂದು ಶಾಲಾ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.
ಮಂಗಳೂರು ನಗರದಲ್ಲಿ ಟ್ರಾಫಿಕ್ ಉಪವಿಭಾಗದ ಎಸಿಪಿ ಉದಯ ಎಂ. ನಾಯಕ್ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನಗಳ ಸಹಿತ ಶಾಲಾ -ಕಾಲೇಜು ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನು ತಡೆದು ತಪಾಸಣೆ ನಡೆ ಸಿದರು. ಸುಮಾರು 250ರಷ್ಟು ವಾಹನಗಳ ತಪಾಸಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿದ ಸುಮಾರು 150 ದ್ವಿಚಕ್ರ ವಾಹನಗಳ ಮೇಲೆ ಪ್ರಕರಣ ದಾಖಸಿದ್ದಾರೆ. ಸುಮಾರು 20,000 ರೂ. ದಂಡ ವಸೂಲಿ ಮಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊರಿಕ್ಷಾ, ಓಮ್ನಿ ಸಹಿತ ಇತರ ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿದ್ದ 40 ವಾಹನಗಳ ಚಾಲಕರಿಗೆ ನೋಟಿಸ್ ನೀಡಿ ಎಚ್ಚರಿಸಿದ್ದಾರೆ. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರರ ಮೇಲೂ ಪ್ರಕರಣ ದಾಖ ಲಿಸಿ ದಂಡ ವಿಧಿಸಿದ್ದಾರೆ.





