ಮಳೆಗಾಲದ ಅಧಿವೇಶನಕ್ಕೆ ಮೊದಲು ಆರ್‌ಬಿಐ ಗವರ್ನರ್ ನೇಮಕ ಸಂಭವ
ಹೊಸದಿಲ್ಲಿ, ಜೂ.22: ಮುಂದಿನ ತಿಂಗಳು ನಡೆಯಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಮುನ್ನ ಆರ್‌ಬಿಐಯ ಹೊಸ ಗವರ್ನರ್ ನೇಮಕವಾಗುವ ಸಂಭವವಿದೆ. ಆರ್‌ಬಿಐಯ ಮಾಜಿ ಉಪಗವರ್ನರ್ ರಾಕೇಶ್ ಮೋಹನ್ ಈ ಕೆಲಸಕ್ಕೆ ಮುಂಚೂಣಿಯ ಅಭ್ಯರ್ಥಿಯಾಗಿರುವಂತೆ ತೋರುತ್ತಿದೆ.
ಹಾಲಿ ಗವರ್ನರ್ ರಘುರಾಮ ರಾಜನ್‌ರ ಅವಧಿ ಸೆ.4ಕ್ಕೆ ಕೊನೆಗೊಳ್ಳಲಿದ್ದು, ಅವರು 2ನೆ ಅವಧಿಗೆ ಮುಂದುವರಿಯುವುದಿಲ್ಲವೆಂದು ಕಳೆದ ವಾರ ಘೋಷಿಸಿದ್ದಾರೆ. ಸರಕಾರ ರಘುರಾಮ ರಾಜನ್‌ರ ಉತ್ತರಾಧಿಕಾರಿಯ ಆಯ್ಕೆಯ ಸನಿಹದಲ್ಲಿದೆ. ಜುಲೈ ಮಧ್ಯ ಭಾಗದೊಳಗೆ ನೇಮಕಾತಿ ನಡೆಯಬಹುದೆಂದು ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರಕೃತ ವಾಶಿಂಗ್ಟ್ ಮೂಲದ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಭಾರತದ ಕಾರ್ಯಕಾರಿ ನಿರ್ದೇಶಕರಾಗಿರುವ ಮೋಹನ್, ಮಿಂಟ್ ರಸ್ತೆಯ ಈ ಗೌರವಾನ್ವಿತ ಹುದ್ದೆಯ ಮುಂಚೂಣಿ ಅಭ್ಯರ್ಥಿಯಾಗಿದ್ದಾರೆಂದು ಅಧಿಕಾರಿ ವಲಯದಲ್ಲಿ ಉಲ್ಲೇಖಿಸಲ್ಪಡುತ್ತಿದೆ.
ಎಸ್‌ಬಿಐಯ ವರಿಷ್ಠ ಅರುಂಧತಿ ಭಟ್ಟಾಚಾರ್ಯ, ಆರ್‌ಬಿಐಯ ಮಾಜಿ ಉಪ ಗವರ್ನರ್ ಸುಬೀರ್ ಗೋಕರ್ಣ್ ಹಾಗೂ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತಾ ದಾಸ್ ಸ್ಪರ್ಧೆಯಲ್ಲಿದ್ದಾರೆಂದು ಹೇಳಲಾಗುತ್ತಿರುವ ಇತರರಾಗಿದ್ದಾರೆ.
ಆರ್‌ಬಿಐ ಉಪ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್‌ರ ಹೆಸರುಗಳೂ ಚಾಲ್ತಿಯಲ್ಲಿವೆ.







