ತಾಯಿಯ ಮನೆ ತೆರವುಗೊಳಿಸುವಂತೆ ‘ಸ್ವಾರ್ಥಿ’ ಮಗನಿಗೆ ಆದೇಶ
ಹೊಸದಿಲ್ಲಿ, ಜೂ.22: ಮಗನೊಬ್ಬನನ್ನು ‘ಕೃತಘ್ನ ಹಾಗೂ ಸ್ವಾರ್ಥಿ’ ಎಂದು ಅಭಿಪ್ರಾಯಿಸಿರುವ ದಿಲ್ಲಿಯ ನ್ಯಾಯಾಲಯವೊಂದು, ತಾಯಿಯ ಮನೆಯನ್ನು ತೆರವುಗೊಳಿಸುವಂತೆ ಆತನಿಗೆ ಆದೇಶಿಸಿದೆ. ತಾಯಿ ತನ್ನ ಮಗನ ವಿರುದ್ಧ ಕಿರುಕುಳದ ದೂರನ್ನು ದಾಖಲಿಸಿದ್ದರು.
ತಾಯಿಯೇ ಮಗನ ವಿರುದ್ಧ ದೂರು ನೀಡಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ವ್ಯಾಖ್ಯಾನಿಸಿದ ನ್ಯಾಯಾಲಯ, 2012ರಲ್ಲಿ ದಂಪತಿಯ ವಿರುದ್ಧ ದೂರು ದಾಖಲಿಸಿದ್ದ ತಾಯಿಗೆ ತಿಂಗಳಿಗೆ ರೂ. 10 ಸಾವಿರ ಹಾನಿ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ತಾಯಿಯನ್ನು ತುಳಿದು ಮಗು ಬೆಳೆಯುವುದು, ಕೃತಘ್ನ ಹಾಗೂ ಸ್ವಾರ್ಥಿಯಾಗಿರುವುದು, ತನ್ನ ಕೃತ್ಯಗಳಿಗೆ ಉತ್ತರದಾಯಿಯಾಗದಿರುವುದು ಹಾಗೂ ತನ್ನ ತಪ್ಪೇನೂ ಇಲ್ಲವೆಂಬ ಭಾವನೆಯನ್ನು ಜೀವನವಿಡೀ ತಳೆಯುವುದು ಪ್ರಪಂಚದಲ್ಲಿ ಕಾಣುತ್ತಿರುವ ಅತ್ಯಂತ ದುಃಖದ ವಿಷಯಗಳಾಗಿವೆ.
ಇದು, ಆಸ್ತಿ ಮರುವಶ, ಹಾನಿ, ಆಸ್ತಿಯ ಹಕ್ಕುದಾರನನ್ನು ಹೊರಗಿಟ್ಟು ಲಾಭ ಪಡೆಯುವುದು ಹಾಗೂ ಮಗನ ವಿರುದ್ಧ ತಾಯಿ ದಾಖಲಿಸಿರುವ ಶಾಶ್ವತ ಪ್ರತಿಬಂಧಕಾಜ್ಞೆಯ ಈ ಮೊಕದ್ದಮೆ ದುರದೃಷ್ಟಕರವಾಗಿದೆಯೆಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಸವಿತಾ ರಾವ್ ಹೇಳಿದ್ದಾರೆ.
ತನ್ನ ಮಗ ಬಲಾತ್ಕಾರವಾಗಿ ತನ್ನ ಮನೆಯ ಮಹಡಿಯಲ್ಲಿ ವಾಸಿಸುತ್ತಿದ್ದಾನೆ. ಅದಕ್ಕೆ ಬಾಡಿಗೆ ಕೊಟ್ಟು ಆರ್ಥಿಕವಾಗಿ ನೆರವಾಗುವಂತೆ ಕೇಳಿದಾಗ ಬೆದರಿಕೆ ಹಾಕುತ್ತಿದ್ದಾನೆಂದು ತಾಯಿ 2012ರಲ್ಲಿ ದೂರು ದಾಖಲಿಸಿದ್ದಳು.







