ಸ್ವೀಡಿಷ್ ಫುಟ್ಬಾಲ್ ಆಟಗಾರನಿಗೆ ರೆಡ್ ಕಾರ್ಡ್ !
ಮೈದಾನದಲ್ಲಿ ಹೂಸು ಬಿಟ್ಟಿದ್ದೇ ಪ್ರಮಾದ

ಸ್ಟಾಕ್‌ಹೋಮ್, ಜೂ.23: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಆಟದ ಮೈದಾನದಲ್ಲಿ ಹೂಸು ಬಿಟ್ಟಿದ್ದಕ್ಕೆ ಸ್ವೀಡನ್ನಿನ ಫುಟ್ಬಾಲ್ ಆಟಗಾರನೊಬ್ಬನಿಗೆ ರೆಫ್ರೀ ರೆಡ್ ಕಾರ್ಡ್ ತೋರಿಸಿದ ಘಟನೆ ವರದಿಯಾಗಿದೆ.
ಜರ್ನ ಎಸ್. ಕೆರಿಸರ್ವ್ ತಂಡ ಹಾಗೂ ಪೆರ್ಶಗೆನ್ ಎಸ್. ಕೆ. ತಂಡಗಳ ನಡುವೆ ಆಟ ನಡೆಯುತ್ತಿದ್ದಾಗ ‘ಉದ್ದೇಶಪೂರ್ವಕ ಪ್ರಚೋದನೆ’ ಹಾಗೂ ‘ಕ್ರೀಡಾಳುವೊಬ್ಬನಿಗೆ ತಕ್ಕುದಲ್ಲದ ನಡವಳಿಕೆ’ ತೋರಿದ ಆರೋಪವನ್ನು ಆಟಗಾರ ಆಡಮ್ ಲಿಂಡಿನ್ ಲ್ ಜುಂಗ್‌ಕ್ವಿಸ್ಟ್ ಮೇಲೆ ಹೊರಿಸಲಾಗಿದೆ. ಆತನಿಗೆ ಮೊದಲು ಎರಡು ಬಾರಿ ಹಳದಿ ಕಾರ್ಡ್ ಕೂಡ ತೋರಿಸಲಾಗಿ ನಂತರ ರೆಡ್ ಕಾರ್ಡ್ ತೋರಿಸಿ ಆಟದ ಮೈದಾನದಿಂದ ‘ವಿಚಿತ್ರ ಸನ್ನಿವೇಶವೊಂದರಲ್ಲಿ’ ಹೊರಕ್ಕೆ ಕಳುಹಿಸಲಾಯಿತೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
‘‘ನನ್ನ ಹೊಟ್ಟೆ ಸರಿಯಾಗಿರಲಿಲ್ಲದ ಕಾರಣ ನಾನು ಹಾಗೆ ಮಾಡಬೇಕಾಯಿತು,’’ ಎಂದು ಲಿಂಡಿನ್ ಹೇಳಿದ್ದಾರೆನ್ನಲಾಗಿದೆ. ‘‘ಈ ಘಟನೆಯಿಂದ ನನಗೆ ಆಘಾತವಾಗಿದೆ. ಫುಟ್ಬಾಲ್ ಮೈದಾನದಲ್ಲಿ ಹೀಗೆ ಆಗಿರಲಿಕ್ಕಿಲ್ಲ,’’ಎಂದು ಅವರು ಹೇಳಿದ್ದಾರೆ.
‘‘ನನಗೆ ಸ್ವಲ್ಪವೂ ಹೂಸು ಬಿಡಲು ಅವಕಾಶವಿಲ್ಲವೇ ಎಂದು ನಾನು ರೆಫ್ರೀ ಬಳಿ ಕೇಳಿದಾಗ ಆತ ‘ಇಲ್ಲ’ ಎಂದರು. ಆದರೆ ನಾನು ನನ್ನ ಕೈಮೇಲೆ ಹೂಸು ಬಿಟ್ಟು ಅವರತ್ತ ಎಸೆದೆನೆಂದು ಅವರಿಗೆ ಅನಿಸಿರಬೇಕು. ಆದರೆ ನಾನು ಹಾಗೆ ಮಾಡಿಲ್ಲ,’’ ಎಂದು ಆತ ಬಹಿರಂಗ ಪಡಿಸಿದ್ದಾರೆ.
‘‘ನಾನು ಆತನಿಂದ ಸ್ವಲ್ಪ ದೂರದಲ್ಲಿಯೇ ಇದ್ದರೂ ಆತ ಜೋರಾಗಿ ಹೂಸು ಬಿಟ್ಟಿದ್ದನ್ನು ಕೇಳಿದ್ದೆ. ಆತ ಉದ್ದೇಶ ಪೂರ್ವಕವಾಗಿ ಹಾಗೆ ಮಾಡಿದ್ದ. ಇದು ಸರಿಯಲ್ಲ. ಇದಕ್ಕಾಗಿಯೇ ಆತನಿಗೆ ಮೊದಲ ಹಳದಿ ಕಾರ್ಡ್ ತೋರಿಸಲಾಯಿತು,’’ಎಂದು ಎದುರಾಳಿ ತಂಡದ ಆಟಗಾರ ಕ್ರಿಸ್ಟೋಫರ್ ಲಿಂಡೆ ಹೇಳಿದ್ದಾರೆ.
ಇಪ್ಪತ್ತೈದು ವರ್ಷದ ಆಟಗಾರನಿಗೆ ಹಳದಿ ಕಾರ್ಡ್ ತೋರಿಸಿದ ರೆಫ್ರೀ ತಾನು ಇಂತಹ ಘಟನೆಗಳನ್ನು ಈ ಹಿಂದೆಯೂ ನೋಡಿದ್ದಾಗಿ ಹೇಳುತ್ತಾರೆ.
‘‘ಒಮ್ಮೆ ಆಟಗಾರನೊಬ್ಬ ಪಿಚ್ ಸಮೀಪವೇ ಮೂತ್ರ ವಿಸರ್ಜಿಸಿದ್ದ. ಆತನಿಗೂ ಹಳದಿ ಕಾರ್ಡ್ ತೋರಿಸಬೇಕಾಯಿತು’’ಎಂದಿದ್ದಾರೆ.







