ಕೋಪಾ ಅಮೆರಿಕ: ಹಾಲಿ ಚಾಂಪಿಯನ್ ಚಿಲಿ ಫೈನಲ್‌ಗೆ
ಪ್ರಶಸ್ತಿ ಸುತ್ತಿನಲ್ಲಿ ಅರ್ಜೆಂಟೀನ ಎದುರಾಳಿ

ಚಿಕಾಗೊ, ಜೂ.23: ಮಳೆ ಬಾಧಿತ ಸೆಮಿಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದ ಚಿಲಿ ತಂಡ 100ನೆ ಆವೃತ್ತಿಯ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ಹಾಲಿ ಚಾಂಪಿಯನ್ ಚಿಲಿ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು ಎದುರಿಸಲಿದೆ. ಕಳೆದ ವರ್ಷದ ಕೋಪಾ ಅಮೆರಿಕ ಫೈನಲ್‌ನಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆಗ ಚಿಲಿ ಚಾಂಪಿಯನ್ ಎನಿಸಿಕೊಂಡಿತ್ತು. ಅರ್ಜೆಂಟೀನ ಈ ತಿಂಗಳಾರಂಭದಲ್ಲಿ ನಡೆದ ಡಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಚಿಲಿ ತಂಡವನ್ನು 2-1 ಗೋಲು ಅಂತರದಿಂದ ಮಣಿಸಿತ್ತು.
ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ 7-0 ಅಂತರದಿಂದ ಭರ್ಜರಿ ಜಯ ಸಾಧಿಸಿದ್ದ ಚಿಲಿ ಬುಧವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲೂ ಅದೇ ಪ್ರದರ್ಶವನ್ನು ಮುಂದುವರಿಸಿತು. ಮೊದಲ 11 ನಿಮಿಷಗಳ ಆಟದಲ್ಲಿ ಎರಡು ಗೋಲು ಬಾರಿಸಿತು.
ಚಿಲಿ ಆಟಗಾರ ಚಾರ್ಲ್ಸ್ ಅರಂಗಝ್ ಏಳನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. 11ನೆ ನಿಮಿಷದಲ್ಲಿ ಗೋಲು ಬಾರಿಸಿದ ಜೋಸ್ ಪೆಡ್ರೊ ಫುಯೆಂಝಾಲಿದಾ ಚಿಲಿ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.
ಚಿಲಿ ತಂಡ 2-0 ಮುನ್ನಡೆಯಲ್ಲಿದ್ದಾಗ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಸ್ಟೇಡಿಯಂನಲ್ಲೇ ಆಶ್ರಯ ಪಡೆದರು. ಸುಮಾರು ಎರಡು ಗಂಟೆ, 25 ನಿಮಿಷಗಳ ಬಳಿಕ ಪಂದ್ಯ ಪುನರಾರಂಭವಾಯಿತು.
ದ್ವಿತೀಯಾರ್ಧದ ಪಂದ್ಯ ಪುನರಾರಂಭವಾದ ಬಳಿಕ ಉಭಯ ತಂಡಗಳು ಚೆಂಡಿಗಾಗಿ ತೀವ್ರ ಪೈಪೋಟಿ ನಡೆದ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಕೊಲಂಬಿಯಾದ ಸ್ಟಾರ್ ಆಟಗಾರ ಜೇಮ್ಸ್ ರೊಡ್ರಿಗಝ್ ಪಂದ್ಯದ ದ್ವಿತೀಯಾರ್ಧದ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರು.
ಕೊನೆಯ ತನಕ 2-0 ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾದ ಚಿಲಿ ಫೈನಲ್‌ಗೆ ತಲುಪಿತು.







