ಆಮಿಷಗಳಿಗೆ ಒಳಗಾಗದೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ: ಸಚಿವ ಪ್ರಮೋದ್ ಮಧ್ವರಾಜ್
ವಿಕಾಸಸೌಧದ 444ನೆ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿ

ಬೆಂಗಳೂರು, ಜೂ.23: ಯಾವುದೇ ರಾಜಕೀಯ ಆಮಿಷಗಳಿಗೆ ಬಲಿಯಾಗದೆ ನನ್ನ ತಂದೆ-ತಾಯಿಯಂತೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿನ 444 ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಸುದ್ದಿಗೋಷ್ಠಿ ಆರಂಭಿಸಿದ ಸಚಿವರು, ಒಳನಾಡು ಮೀನುಗಾರಿಕೆಗೂ ಕಾಯಕಲ್ಪ ನೀಡುತ್ತೇನೆ. ಕ್ರೀಡೆ ಮತ್ತು ಯುವಜನ ಇಲಾಖೆಯಿಂದ ಸಭೆ ನಡೆಸುತ್ತೇನೆ. ನಮ್ಮ ಯುವಕರಿಗೆ ಒಳ್ಳೆಯ ತರಬೇತಿ ಇದೆ. ಆರ್ಥಿಕ ಸಮಸ್ಯೆಯಿರುವ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಆಹಾರ ಒದಗಿಸುತ್ತೇವೆ. ಅಲ್ಲದೇ ಉತ್ತಮ ತರಬೇತಿ ಕೂಡಾ ನೀಡುತ್ತೇವೆ. ಶ್ರೀಮಂತರು ಕ್ರೀಡಾಪಟುಗಳು ಆಗುವುದು ಕಡಿಮೆ. ಮಧ್ಯಮ ವರ್ಗದ ಬಡ ಮಕ್ಕಳಿಗೆ ತರಬೇತಿ ಕೊಡುತ್ತೇವೆ ಎಂದು ಹೇಳಿದರು.
ಪ್ರಥಮ ಬಾರಿಗೆ ಮಂತ್ರಿಯಾಗುವ ಅವಕಾಶ ಲಭಿಸಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೀನುಗಾರಿಕೆ ಇಲಾಖೆಗಳನ್ನು ನನಗೆ ನೀಡಲಾಗಿದೆ. ನಮ್ಮ ತಂದೆ ತಾಯಿಯಂತೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ. ಯಾವುದೇ ಆಮಿಷಗಳಿಗೆ ಒಳಗಾಗುವುದಿಲ್ಲ ಎಂದರು.
ಕರಾವಳಿಯ ಮೀನುಗಾರರ ಸಮಸ್ಯೆಗಳ ಬಗ್ಗೆ ಅರಿವಿದೆ. ಮೀನಿನ ಸಂತತಿ ನಾಶ ಮೀನಾಗಾರಿಕೆ ಕ್ಷೇತ್ರದ ದೊಡ್ಡ ಸಮಸ್ಯೆ. ಮೀನುಗಾರಿಕೆಯಲ್ಲಿ ಕಟ್ಟುನಿಟ್ಟಿನ ಕಾನೂನಿನ ಅವಶ್ಯಕತೆ ಇದೆ. ಸುಸ್ಥಿರ ಮೀನುಗಾರಿಕೆಗೆ ನಾನು ಗಮನ ಹರಿಸುತ್ತೇನೆ. ಒಂದೇ ರಾಜ್ಯದಿಂದ ಕಟ್ಟುನಿಟ್ಟಿನ ಕಾನೂನು ಮಾಡಲು ಸಾಧ್ಯವಿಲ್ಲ, ಎಲ್ಲ ಕರಾವಳಿ ರಾಜ್ಯಗಳು ಏಕ ರೀತಿಯ ಕಾನೂನು ಮಾಡುವ ಆವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಎಲ್ಲ ರಾಜ್ಯಗಳ ಮೀನುಗಾರಿಕೆ ಸಚಿವರ ಸಮಾವೇಶ ನಡೆಸುವ ವಿಚಾರವಿದೆ ಎಂದರು.
ಸಚಿವ ಸ್ಥಾನ ಸಿಕ್ಕಿದ್ದಕ್ಕೆ ತವರು ಜಿಲ್ಲೆಯ ಶಾಸಕರೇ ಚಕಾರವೆತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಸಚಿವನಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿದವರೆಲ್ಲಾ ದೊಡ್ಡ ಮನುಷ್ಯರು. ನಾನಿನ್ನೂ ಚಿಕ್ಕವನು ಎಂದು ಹೇಳಿದ್ದಾರೆ.







