ತ್ರಾಸಿ ದುರಂತದ ಬಗ್ಗೆ ಫೇಸ್‌ಬುಕ್‌ನಲ್ಲಿ ಅಮಾನವೀಯ ಕಮೆಂಟ್: ಆರೋಪಿ ಬಂಧನಕ್ಕೆ ಒತ್ತಾಯ
ಮುಂದುವರೆಯುತ್ತಿದೆ ವಿಕೃತರ ಚಾಳಿ

ಮೂಡುಬಿದಿರೆ, ಜೂ.23: ಜೂ.21ರಂದು ತ್ರಾಸಿಯಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಶಂಕರ್ ಪ್ರಸಾದ್ ಎಂಬಾತ ಫೇಸ್‌ಬುಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿರುವ ಕೃತ್ಯವನ್ನು ಮೂಡುಬಿದಿರೆಯ ಯುವ ಕ್ರೈಸ್ತ ಮುಖಂಡ ಅಶ್ವಿನಿ ಜೊಸ್ಸಿ ಪಿರೇರಾ ಖಂಡಿಸಿದ್ದು, ಅಮಾನವೀಯ ರೀತಿಯಲ್ಲಿ ಕಮೆಂಟ್ ಮಾಡಿರುವ ವ್ಯಕ್ತಿಯನ್ನು ಪೊಲೀಸ್ ಇಲಾಖೆಯು ಪತ್ತೆ ಹಚ್ಚಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಪಘಾತದಲ್ಲಿ 8 ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ. ಅವಘಡಗಳು ಹೇಗೆ, ಎಲ್ಲಿ ಸಂಭವಿಸುತ್ತವೆ ಎಂದು ಹೇಳಲಾಗದು. ಆದರೆ ಶಂಕರ್ ಪ್ರಸಾದ್ ಎನ್ನುವ ವ್ಯಕ್ತಿಯು ವಿಕೃತ ದೃಷ್ಠಿ ಹಾಗೂ ಮನೋಬಾವದಿಂದ ಫೇಸ್‌ಬುಕ್‌ನಲ್ಲಿ ಪೋಯಿನ ಮಾತ ಪೊರ್ಬುಲ್ ಅತ್ತೇ.. ಬುಡ್ಲೆ..ನಂಕ್ ದಾನೆ (ಸತ್ತವರೆಲ್ಲಾ ಕ್ರೈಸ್ತರಲ್ಲವೇ, ಬಿಡಿ...ನಮಗೇನು..?) ಎಂದು ಕಮೆಂಟ್ ಹಾಕಿ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಇಂತಹ ಕಮೆಂಟ್‌ಗಳನ್ನು ಹಾಕುವುದರಿಂದ ಅಶಾಂತಿ ಉಂಟಾಗಿ ಕೂಮು ಸಾಮರಸ್ಯ ಹಾಳಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಕಮೆಂಟ್ ಹಾಕುವವರು ಮಕ್ಕಳನ್ನು ಕಳೆದುಕೊಂಡಿರುವ ಹೆತ್ತವರ ನೋವನ್ನು ಅರಿತುಕೊಳ್ಳಬೇಕು ಹಾಗೂ ಈ ಘಟನೆಯ ತೀವ್ರತೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು ಶಂಕರ್ ಪ್ರಸಾದ್‌ನಂತಹ ಮನೋಸ್ಥಿತಿ ಉಳ್ಳವರು ಮಾನವ ಜನಾಂಗಕ್ಕೆ ಕಳಂಕ. ಇಂತಹ ವ್ಯಕ್ತಿಯನ್ನು ಪೊಲೀಸ್ ಇಲಾಖೆಯು 7 ದಿನಗಳೊಳಗೆ ಬಂಧಿಸಬೇಕು ಮತ್ತು ಶಂಕರ್ ಪ್ರಸಾದ್ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಇಲ್ಲದಿದ್ದರೆ ದ.ಕ, ಉಡುಪಿ ಜಿಲ್ಲೆಯಾದ್ಯಾಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸಬೆಟ್ಟು ಗ್ರಾ.ಪಂ. ಅಧ್ಯಕ್ಷ ಮನೋಜ್ ಆಲ್ವಾರಿಸ್, ಮಾಜಿ ಅಧ್ಯಕ್ಷ ಜೆರಾಲ್ಡ್ ಮೆಂಡೀಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







