ಬೆಂಬಲಿಗರನ್ನು ನಿರಾಸೆಗೊಳಿಸಿದ ವಿನಯ್ ಕುಮಾರ್ ಸೊರಕೆ!
ಸೊರಕೆ ಪರವಾಗಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರು

ಕಾಪು, ಜೂ.23: ನಗರಾಭಿವೃದ್ಧಿ ಸಚಿವರಾಗಿದ್ದ ವಿನಯಕುಮಾರ್ ಸೊರಕೆಯವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಸೊರಕೆವರ ಮನವಿ ಮೇರೆಗೆ ರದ್ದುಗೊಳಿಸಿದ ಘಟನೆ ಕಾಪುವಿನಲ್ಲಿ ಗುರುವಾರ ನಡೆದಿದೆ.
ಸೊರಕೆಯವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿದರು. ಅದರಂತೆ ಬೆಳಗ್ಗೆಯಿಂದಲೇ ಕಾಪುವಿನ ರಾಜೀವ್ ಭವನದ ಎದುರು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಅಲ್ಲಿ ಸೇರಿದ್ದ ಪ್ರತಿಭಟನಾಕಾರರು ಕಪ್ಪು ಪಟ್ಟಿ ತೊಟ್ಟು ಸೊರಕೆ ಪರ ಘೋಷಣೆ ಕೂಗಿ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ನಿಷ್ಕಳಂಕವಾಗಿ ತನ್ನ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ ರಾಜ್ಯದ ಅತ್ಯುತ್ತಮ ಸಚಿವರಲ್ಲಿ ಓರ್ವರಾಗಿರುವ ಸೊರಕೆಯವರನ್ನು ವಿನಾಕಾರಣ ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಸರಿಯಲ್ಲ. ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸದಿದ್ದಲ್ಲಿ ಇನ್ನಷ್ಟು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸೊರಕೆ ಹಾಜರು
ಇದೇ ಸಂದರ್ಭದಲ್ಲಿ ದಿಲ್ಲಿಯಲ್ಲಿದ್ದ ಸೊರಕೆಯವರು ಪ್ರತಿಭಟನೆಯ ಸುದ್ದಿ ತಿಳಿದು ನೇರ ಮಂಗಳೂರಿಗೆ ಬಂದು ಕಾಪುವಿನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಭೆಗೆ ಹಾಜರಾದರು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬೇಡಿ. ನಾನು ನಿಷ್ಠಾವಂತ ಕಾಂಗ್ರೆಸಿಗ. ಆದ್ದರಿಂದ ನನ್ನ ಪರವಾಗಿ ಯಾರೂ ಪ್ರತಿಭಟನೆ ಮಾಡಬಾರದು. ಈಗಾಗಲೇ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಕಾರ್ಯಕರ್ತರು ವೌನಮೆರವಣಿಗೆ ಮಾಡುವುದಾಗಿ ಹೇಳಿದರು. ಆದರೆ ಅದಕ್ಕೂ ಅವಕಾಶ ನೀಡದ ಸೊರಕೆಯವರು ಕುಂದಾಪುರದಲ್ಲಿ ಎಂಟು ಮಕ್ಕಳ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿ ಅವರಿಗಾಗಿ ಒಂದು ನಿಮಿಷದ ವೌನಪ್ರಾರ್ಥನೆ ಮಾಡುವ ಎಂದು ಹೇಳಿದರು. ಬಳಿಕ ವೌನಪ್ರಾರ್ಥನೆ ನಡೆಸಿದ ಬಳಿಕ ಪ್ರತಿಭಟನೆಗೆ ಬಂದಿದ್ದ ಜನರು ಅಲ್ಲಿಂದ ಚದುರಿದರು.
ಕಾಪು ಬ್ಲಾಕ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ವೈ.ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







