ರಮಝಾನ್ ಏಕತೆಯ ಸಂಕೇತ
ನಾನು ಕಂಡಂತೆ ರಮಝಾನ್

ಮುಸ್ಲಿಮರು ಬಹಳ ಪ್ರಾಶಸ್ತ್ಯ ಕೊಡುವಂತಹ ಒಂದು ಹಬ್ಬವಾಗಿದೆ ರಮಝಾನ್. ಇವತ್ತಿನ ಆಧುನಿಕ ಮತ್ತು ತಂತ್ರಜ್ಞಾನ ಯುಗದಲ್ಲಿ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಬಹುದೊಡ್ಡ ವಿಷಯ. ಅದಲ್ಲದೆ, ಒಂದು ತಿಂಗಳ ಉಪವಾಸವನ್ನು ಮಕ್ಕಳು, ಯುವಕರು, ವಯಸ್ಸಿಗರು ಎಂಬ ಭೇದವಿಲ್ಲದೆ, ಎಲ್ಲರೂ ಒಂದೇ ರೀತಿಯಲ್ಲಿ ಆಚರಿಸುವುದು ಗಂಭೀರತೆಯನ್ನು ಸೂಚಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಕೂಡಾ ಪಾವಿತ್ರತೆ ಮತ್ತು ಭಕ್ತಿ ಭಾವದ ಮೂಲಕ ರಮಝಾನಿನ ಶಿಸ್ತನ್ನು ಸೂಚಿಸುತ್ತಾರೆ. ಸಣ್ಣಂದಿನಲ್ಲೇ ಅವರಿಗೆ ಉಪವಾಸ ಆಚರಣೆಯ ಮಹತ್ವವನ್ನು ಹೆತ್ತವರು ತಿಳಿಸಿರುವುದು ಕಂಡುಬರುತ್ತದೆ.
ಧಾರ್ಮಿಕವಾಗಿ ತುಂಬಾ ಮಹತ್ವದೊಂದಿಗೆ ಆರೋಗ್ಯ ದೃಷ್ಠಿಯಿಂದ ಉಪವಾಸ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗೆ ಬೇಗ ಎದ್ದುಕೊಂಡು ಪ್ರಾರ್ಥನೆ ಮಾಡಿದ ನಂತರ ಸಂಜೆಯವರೆಗೆ ಉಪವಾಸ ತೊರೆಯುವುದಕ್ಕೆ ಕಾಯುವುದು ಒಬ್ಬ ಮನುಷ್ಯನ ತಾಳ್ಮೆಯನ್ನು ತೋರಿಸುತ್ತದೆ. ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಬೆಳಗ್ಗಿನ ಜಾವದಿಂದ ಹಿಡಿದು ಸೂರ್ಯ ಮುಳುಗುವವರೆಗೆ ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಹಸಿವನ್ನು ನಿಯಂತ್ರಿಸುವುದು ಶಿಸ್ತು, ಸಂಯಮಕ್ಕೆ ಪ್ರೇರಣೆ ಕೊಡುತ್ತದೆ. ಬೇರೆಯವರು ತಿನ್ನುವುದನ್ನು ಕಂಡರೂ ತನ್ನ ಹಸಿವನ್ನು ನಿಯಂತ್ರಿಸುವುದು ಆತ್ಮಸಂಯಮದಲ್ಲಿಟ್ಟುಕೊಂಡು ದೇವರಿಗೆ ಅರ್ಪಣೆಯಾಗುವುದು ವಿಶೇಷ ತ್ಯಾಗವಾಗಿದೆ. ಯಾವುದನ್ನೂ ತಡೆದುಕೊಳ್ಳಬಹುದು. ಆದರೆ ಹಸಿವನ್ನು ತಡೆದಿಟ್ಟುಕೊಳ್ಳುವುದು ರಮಝಾನಿನ ಗಂಭೀರತೆಯನ್ನು ತೋರಿಸುತ್ತದೆ.
ರಮಝಾನ್‌ನಲ್ಲಿ ವಿಶೇಷವಾಗಿ ಮಸೀದಿಗಳಲ್ಲಿ ಒಟ್ಟಾಗಿ ಪ್ರಾರ್ಥಿಸುವುದು ಏಕತೆ ಮತ್ತು ಶಿಸ್ತಿನ ಸಂಕೇತ. ಇದನ್ನು ಸಮಾಜವು ನೋಡಿ ಕಲಿಯಬೇಕಾಗಿದೆ. ಮಸೀದಿಗೆ ತೆರಳುವ ಸಂದರ್ಭಗಳಲ್ಲಿ ಹೆಚ್ಚಾದ ಜನ ಬಿಳಿ ಬಟ್ಟೆ ಹಾಕಿಕೊಂಡು ತೆರಳುವುದು, ಶಾಂತಿ ಮತ್ತು ಅಚ್ಚುಕಟ್ಟನ್ನು ತೋರಿಸುತ್ತದೆ. ಎಲ್ಲಾ ಧರ್ಮಗಳೂ ಉಪವಾಸಕ್ಕೆ ಮಹತ್ವವನ್ನು ಕೊಡುತ್ತವೆ. ಹಿಂದೂ ಧರ್ಮದಲ್ಲಿ ಅಯ್ಯಪ್ಪ ಭಕ್ತರು ವ್ರತ ಆಚರಿಸುತ್ತಾರೆ. ಕ್ರೈಸ್ತ ಧರ್ಮದಲ್ಲಿ 40 ದಿನಗಳ ಕಾಲ ಉಪವಾಸ ಆಚರಿಸುತ್ತೇವೆ. ಏಸು ಕ್ರಿಸ್ತರ ಶ್ರಮದ ದಿನಗಳು, ಹಿಂಸೆಯ ದಿವಸ, ಪಾಪವನ್ನು ಒಪ್ಪಿಕೊಳ್ಳುವ ಉಪವಾಸ ಮಾಡುತ್ತೇವೆ. ಒಟ್ಟಾರೆಯೂ ಉಪವಾಸ ಮಾನವ ಕುಲಕ್ಕೆ ಒಳ್ಳೆಯದಾದ ವಿಷಯವಾಗಿದೆ. ವಿವಿಧ ಧರ್ಮಗಳಲ್ಲಿ ಉಪವಾಸ ಬೇರೆಬೇರೆ ಅರ್ಥವನ್ನು ಕೊಡುತ್ತದೆ.
ರೆ. ವಿಜಯ ಹಾರ್ವಿನ್,
ಧರ್ಮಗುರುಗಳು, ಸುದಾನ ದೇವಾಲಯ ಪುತ್ತೂರು ಮತ್ತು ಸಂಚಾಲಕರು, ಸುದಾನ ಶಾಲೆ.







