ಐಒಸಿಯಿಂದ 1 ಬಿಲಿಯನ್ ಡಾಲರ್ ಪರಿಹಾರಕ್ಕೆ ಸ್ವಿಸ್ ಕೋರ್ಟ್ ಮೊರೆ ಹೋದ ಕುವೈಟ್

ಕುವೈಟ್ ಸಿಟಿ, ಜೂ.23: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಯಿಂದ ಅಮಾನತು ಶಿಕ್ಷೆ ಅನುಭವಿಸುತ್ತಿರುವ ಕುವೈಟ್,, 1 ಬಿಲಿಯನ್ ಡಾಲರ್ ಪರಿಹಾರವನ್ನು ನಿರೀಕ್ಷಿಸುತ್ತಿದ್ದು, ಈ ಸಂಬಂಧ ಸ್ವಿಸ್‌ನ ನ್ಯಾಯಾಲಯದ ಮೊರೆ ಹೋಗಿದೆ ಎಂದು ಯುವಜನ ಹಾಗೂ ಮಾಹಿತಿ ಇಲಾಖೆಯ ಸಚಿವರು ಹೇಳಿದ್ದಾರೆ.
ಕುವೈಟ್‌ನಲ್ಲಿ ಕ್ರೀಡೆಯ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಕಾನೂನು ಇರುವ ಕಾರಣ ಕಳೆದ ಅಕ್ಟೋಬರ್‌ನಲ್ಲಿ ಐಒಸಿ ಹಾಗೂ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಕುವೈಟ್‌ನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಅಮಾನತು ಮಾಡಿದ್ದವು.
ಕುವೈಟ್‌ನ್ನು ಅಮಾನತುಗೊಳಿಸಿರುವ ಕಾರಣ ಆ ದೇಶದ ಅಥ್ಲೀಟ್‌ಗಳು ಆಗಸ್ಟ್‌ನಲ್ಲಿ ಬ್ರೆಝಿಲ್‌ನ ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ನಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ. ಸರಿಯಾದ ತನಿಖೆ ನಡೆಸದೇ ಕುವೈಟ್‌ನ್ನು ಅಂತಾರಾಷ್ಟ್ರೀಯ ಕ್ರೀಡಾ ಚಟುವಟಿಕೆಗಳಿಂದ ಅಮಾನತು ಗೊಳಿಸಿರುವ ಕ್ರಮ ನ್ಯಾಯಸಮ್ಮತವಾಗಿಲ್ಲ ಎಂದು ಕುವೈಟ್‌ನ ಯುವಜನ ಹಾಗೂ ಮಾಹಿತಿ ಸಚಿವರು ಹೇಳಿದ್ದಾರೆ.
ಐಒಸಿ ಹಾಗೂ ಫಿಫಾ ಮಾತ್ರವಲ್ಲ ಇತರ 16 ಅಂತಾರಾಷ್ಟ್ರೀಯ ಕ್ರೀಡಾ ಸಂಘಟನೆಗಳು ಕುವೈಟ್‌ನ್ನು ಕಪ್ಪುಪಟ್ಟಿಯಲ್ಲಿರಿಸಿವೆ. 2007ರ ಬಳಿಕ ಮೂರನೆ ಬಾರಿ ಫಿಫಾ ಹಾಗೂ ಐಒಸಿ ಕುವೈಟ್‌ನ್ನು ಅಂತಾರಾಷ್ಟ್ರೀಯ ಕ್ರೀಡೆಯಿಂದ ಅಮಾನತುಗೊಳಿಸಿವೆ. ಕ್ರೀಡೆಗಳಲ್ಲಿ ಅಲ್ಲಿನ ಸರಕಾರದ ಹಸ್ತಕ್ಷೇಪವೇ ಇಂತಹ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ.







