ಸುಳ್ಯ: ಗ್ರೀನ್‌ವ್ಯೆ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ

ಸುಳ್ಯ, ಜೂ.23: ಸುಳ್ಯದ ಗ್ರೀನ್‌ವ್ಯೆ ಶಿಕ್ಷಣ ಸಂಸ್ಥೆಯ ಈ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸರಕಾರ ರಚನೆಗೆ ಚುನಾವಣೆಯನ್ನು ಗುರುವಾರ ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು.
ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ವಿದ್ಯಾರ್ಥಿ ಸರಕಾರದ ಮಂತ್ರಿಮಂಡಲದ ಎಲ್ಲಾ ಸದಸ್ಯರನ್ನೂ ವಿದ್ಯಾರ್ಥಿಗಳೇ ಚುನಾವಣೆಯ ಮೂಲಕ ಆರಿಸುವಂತೆ ಚುನಾವಣೆ ನಡೆಯಿತು. ಶಾಲೆಯ ನಾಲ್ಕನೆ ತರಗತಿಯಿಂದ ಹತ್ತನೆ ತರಗತಿಗಳನ್ನು 14 ಕ್ಷೇತ್ರಗಳನ್ನಾಗಿ ವಿಂಗಡಿಸಿ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಚುನಾವಣೆ ನಡೆಯಿತು. ಮೀಸಲಾತಿ ನಿಯಮದಂತೆ ವಿದ್ಯಾರ್ಥಿನಿಯರಿಗೂ ಒಂದು ಕ್ಷೇತ್ರವನ್ನು ಮೀಸಲಿಡಲಾಗಿತ್ತು.
ಸ್ಟೂಡೆಂಟ್ಸ್ ವೆಲ್ಫೇರ್ ಪಾರ್ಟಿ ಹಾಗೂ ಪೀಪಲ್ಸ್ ವೆಲ್ಫೇರ್ ಪಾರ್ಟಿ ಎಂಬ ಎರಡು ರಾಜಕೀಯ ಪಕ್ಷಗಳು ತಮ್ಮ ಅ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ನಡೆಸಿದವು. ಬಳಿಕ ವಿದ್ಯಾರ್ಥಿಗಳೆ ಚುನಾವಣೆಯ ಉಸ್ತುವಾರಿ ವಹಿಸಿ ಮತಗಟ್ಟೆಗಳ ಅಧಿಕಾರಿಗಳಾಗಿ ಚುನಾವಣೆ ನಡೆಯಿತು. ಶಾಲಾ ಶಿಕ್ಷಕ ರಂಜಿತ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಸರತಿ ಸಾಲಿನಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಮತದಾನ ಮಾಡಿದರು. ನಕಲಿ ಮತದಾನ ಆಗದಂತೆ ತಡೆಯಲು ಕೈಬೆರಳಿಗೆ ಶಾಯಿಯ ಗುರುತನ್ನು ಹಾಕಲಾಗಿತ್ತು. ವಿದ್ಯಾರ್ಥಿಗಳೇ ಪೊಲೀಸ್ ಆಗಿ ಬಂದೋಬಸ್ತ್ ವ್ಯವಸ್ಥೆಯನ್ನೂ ಮಾಡಿದ್ದರು. ಟಿಕೆಟ್ ವಂಚಿತ ಅಭ್ಯರ್ಥಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರೂ ಬಳಿಕ ರಾಜಕೀಯ ಒತ್ತಡಕ್ಕೆ ಮಣಿದು ಕೊನೆಯ ಕ್ಷಣದಲ್ಲಿ ನಾಮಪತ್ರವನ್ನು ಹಿಂದಕ್ಕೆ ಪಡೆದರು.
ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಚುನಾವಣಾ ಕ್ಷೇತ್ರಗಳಿಗೆ ಇಡಲಾಗಿತ್ತು. ಮಹಾತ್ಮ ಗಾಂಧಿ, ಭಗತ್‌ಸಿಂಗ್, ಚೆನ್ನಮ್ಮ, ಅಬ್ಬಕ್ಕ, ರಾಯಣ್ಣ, ಕೆಂಪೇಗೌಡ, ತಿಲಕ್, ಪ್ರಿಯದರ್ಶಿನಿ, ಮೈಸೂರು ಹುಲಿ, ಝಾನ್ಸಿ, ಛತ್ರಪತಿ, ನೇತಾಜಿ, ಚಾಚಾ ನೆಹರೂ, ಸರ್ದಾರ್ ಎಂಬದಾಗಿ ನಾಮಫಲಕ ಹಾಕಲಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿದ್ದಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂದಕ್ಕೆ ಪಡೆಯುವುದು, ಪ್ರಚಾರ, ಅಂಚೆ ಮತ ಚಲಾವಣೆ, ಮತದಾನ, ಮತ ಎಣಿಕೆ ಇತ್ಯಾದಿ ಪ್ರಕ್ರಿಯೆಗಳು ನಡೆದವು.
ಮುಖ್ಯ ಶಿಕ್ಷಕ ಬಿ.ಪಿ.ಅಮರನಾಥ್, ಶಿಕ್ಷಕ ವೃಂದ, ಶಾಲಾ ಸಂಚಾಲಕ ಬಿ.ಎಸ್.ಶರೀಫ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎನ್.ಎ.ಅಬ್ದುಲ್ ನಾವೂರು, ಆಡಳಿತ ಸಮಿತಿ ಕಾರ್ಯದರ್ಶಿ ಕೆ.ಬಿ.ಇಬ್ರಾಹೀಂ ಮೊದಲಾದವರು ಸಹಕರಿಸಿದರು.







