ಹಾಸನ: ಪ್ರೀತಿಸಿ ಮದುವೆಯಾದ ಪತ್ನಿಗೆ ಬೆಂಕಿ ಹಚ್ಚಿದ ಪತಿ
.jpg)
ಹಾಸನ, ಜೂ.23: ತಾನೆ ಇಷ್ಟಪಟ್ಟು ಮದುವೆಯಾದ ಪತ್ನಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಬೀರನಹಳ್ಳಿ ಕೆರೆ (ರಾಘವೇಂದ್ರ ಕಾಲನಿ)ಯಲ್ಲಿ ವಾಸವಾಗಿರುವ ಇಂದ್ರ (24) ಎಂಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಕೆಯ ಪತಿ ಜಗದೀಶ್ ಎಂಬಾತನೇ ಕೃತ್ಯ ಎಸಗಿದ ಆರೋಪಿ.
ಇಂದ್ರ ಮನೆಯಲ್ಲಿ ತನ್ನ ಮಕ್ಕಳ ಜೊತೆ ಮಲಗಿದ್ದ ವೇಳೆ ಕಂಠ ಪೂರ್ತಿ ಕುಡಿದು ಬಂದಿದ್ದ ಜಗದೀಶ್ ರಾತ್ರಿ 12 ಗಂಟೆ ಸುಮಾರಿಗೆ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಈ ವೇಳೆ ಆಕೆ ಎಚ್ಚರವಾಗಿ ಗಂಡನಲ್ಲಿ ಬೇಡಿಕೊಂಡರೂ ಕರುಣೆ ತೋರದ ಜಗದೀಶ್ ಬೆಂಕಿ ಹಚ್ಚಿ ಬಾಗಿಲ ಚಿಲಕ ಹಾಕಿಕೊಂಡು ಹೊರ ನಡೆದಿದ್ದಾನೆ ಎನ್ನಲಾಗಿದೆ. ಆಕೆಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬೆಂಕಿ ನಂದಿಸಿ ತಕ್ಷಣ ನಗರದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಜಗದೀಶ್ ಮತ್ತು ಇಂದ್ರ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ನಂತರ ಜೀವನ ನಿಭಾಯಿಸಲು ಈಕೆ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಲು ತನ್ನ ಹಂಡತಿಗೆ ಪ್ರತಿನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಮಕ್ಕಳು ಆಡುವಳ್ಳಿಯಲ್ಲಿರುವ ಅಜ್ಜಿ ಮನೆಗೆ ತೆರಳಿದ್ದು, ಹೆಂಡತಿ ಒಬ್ಬಳೆ ಇದ್ದ ವೇಳೆ ಕುಡಿದು ಬಂದ ಜಗದೀಶ್ ಮಕ್ಕಳು ಮನೆಯಲ್ಲಿ ಇಲ್ಲವೆಂದು ಜಗಳವಾಡಿದ್ದ. ಬಳಿಕ ವಾಪಸ್ ಮಕ್ಕಳನ್ನು ಕರೆತರಲಾಗಿತ್ತು ಎನ್ನಲಾಗಿದೆ.
ಪ್ರೀತಿಸಿ ನನ್ನನ್ನು ಮದುವೆಯಾದ ಜಗದೀಶ್ ಮತ್ತೋರ್ವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಬಗ್ಗೆ ಪ್ರಶ್ನೆ ನಾನು ಮಾಡಿದ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾನೆ. ನನ್ನನ್ನು ಸಾಯಿಸುವ ಉದ್ದೇಶದಿಂದಲೇ ಜಗಳ ತೆಗೆದು ಬೆಂಕಿ ಹಚ್ಚಿದ್ದಾನೆ ಎಂದು ಪತ್ನಿ ಇಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಗದೀಶ್ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.







