ಅತ್ಯಾಚಾರ ಆರೋಪಿಯ ವಂಚನೆ ಸಾಬೀತು: 4 ತಿಂಗಳು ಶಿಕ್ಷೆ

ಮಂಗಳೂರು, ಜೂ.23: ಅತ್ಯಾಚಾರ ಆರೋಪಿಯ ವಂಚನೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 6ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ಕಣಿಯೂರು ನಾಗಳಿಕೆ ನಿವಾಸಿ ಮಾಯಿಲ ಯಾನೆ ಮಾಯಿಲಪ್ಪ (38) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ದಂಡದ ಹಣ ಪಾವತಿಸಲು ತಪ್ಪಿದಲ್ಲಿ ಮತ್ತೆ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ಅತ್ಯಾಚಾರದಿಂದ ಹುಟ್ಟಿದ ಗಂಡು ಮಗುವಿಗೆ 40 ಸಾವಿರ ರೂ.ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಕರ್ನಾಟಕ ಸಂತ್ರಸತಿ ಪರಿಹಾರ ಯೋಜನೆಯಡಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಅಚ್ಯಾಚಾರ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದೂರುದಾಖಲಾಗಿತ್ತು. ಅಂದಿನ ಎಸ್‌ಐ ಶಿವಕುಮಾರ್ ಕೆ.ಆರ್. ಪ್ರಕರಣ ದಾಖಲಿಸಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ವಿಚಾರಣೆ ನಡೆಸಿದ್ದು, ಆರೋಪಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸಿ ವಂಚನೆ ಪ್ರಕರಣ ಸಾಬೀತಾಗಿದೆ.
ಸರಕಾರಿ ಅಭಿಯೋಜಕರಾದ ಜುಡಿತ್ ಒ.ಎಂ.ಕ್ರಾಸ್ತಾ ಸಂತ್ರಸ್ತೆಯ ಪರವಾಗಿ ವಾದಿಸಿದ್ದರು.







