ಬೆಳೆವಿಮೆ ಪರಿಹಾರದಿಂದ ರೈತರಿಗೆ ವಂಚನೆ

ಶಿಕಾರಿಪುರ, ಜೂ.23: ಭೀಕರ ಬರದಿಂದ ಬೆಳೆ ಬೆಳೆಯಲಾಗದೆ ಸಂಕಷ್ಟದಿಂದ ನೊಂದಿರುವ ರೈತರಿಗೆ ಅಧಿಕಾರಿಗಳು, ಭತ್ತ ಬೆಳೆದು ಕಟಾವು ಮಾಡಲಾಗಿದೆ ಎಂಬ ಅತ್ಯಂತ ಬೇಜವಾಬ್ದಾರಿಯುತ ವರದಿಯನ್ನು ನೀಡಿ, ವಿಮೆಯಿಂದ ರೈತ ಸಮೂಹ ವಂಚಿತರಾಗುವಂತೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಪ್ರದೀಪ ಆರೋಪಿಸಿದ್ದಾರೆ.
ಅಧಿಕಾರಿಗಳ ಲೋಪಕ್ಕೆ ರೈತರಿಗೆ ಅನ್ಯಾಯವಾದಲ್ಲಿ ಸಾಮೂಹಿಕವಾಗಿ ರೈತರು ವಿಷ ಸೇವಿಸಿ ಪ್ರಾಣ ತ್ಯಾಗ ಮಾಡುವುದಾಗಿ ಗುರುವಾರ ನಡೆದ ತಾಲೂಕಿನ ನರಸಾಪುರ, ಅಗ್ರಹಾರ ಮುಚುಡಿ ಹಾಗೂ ತಾಳಗುಂದ ಗ್ರಾಮದ ರೈತರ ಸಮ್ಮುಖದ ಅಧಿಕಾರಿಗಳ ಸಭೆಯಲ್ಲಿ ಬೆದರಿಕೆ ಹಾಕಿದರು.
ತಾಪಂ ಸಭಾಂಗಣದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ತಾಳಗುಂದ ನರಸಾಪುರ ಹಾಗೂ ಅಗ್ರಹಾರ ಮುಚುಡಿ ಗ್ರಾಮದ ಮುಖಂಡರ ಹಾಗೂ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬೆಳೆ ವಿಮೆ ಪರಿಹಾರಕ್ಕೆ ರೈತರು ಅರ್ಹತೆಯನ್ನು ಹೊಂದಿದ್ದು ನರಸಾಪುರ,ಅಗ್ರಹಾರ ಮುಚುಡಿ,ತಾಳಗುಂದ ಗ್ರಾಮ ಕೇವಲ ಮಳೆಯಾಧಾರಿತ ಕೃಷಿ ಚಟುವಟಿಕೆಯ ಗ್ರಾಮವಾಗಿದೆ. ಬರಗಾಲದ ತೀವ್ರತೆಯ ವರದಿಗಾಗಿ ಅಧ್ಯಯನಕ್ಕೆ ಗ್ರಾಮಕ್ಕೆ ಅಧಿಕಾರಿಗಳು,ಜನಪ್ರತಿನಿಧಿಗಳ ಜತೆ ಚರ್ಚಿಸಿ ವಾಸ್ತವಿಕತೆಯ ಬಗ್ಗೆ ಸರಕಾರದ ಗಮನ ಸೆಳೆದು ಬೆಳೆ ವಿಮೆ ಪರಿಹಾರಕ್ಕೆ ಸೂಕ್ತ ಭರವಸೆಯನ್ನು ನೀಡಿದ್ದರು ಎಂದು ನರಸಾಪುರ ಗ್ರಾಪಂ ಅಧ್ಯಕ್ಷ ಪ್ರದೀಪ ಸಭೆಯ ಗಮನ ಸೆಳೆದರು.
ಇದೀಗ ಬೆಳೆ ವಿಮೆ ಪರಿಹಾರದಿಂದ ಗ್ರಾಮ ವಂಚಿತವಾಗಿದ್ದು, ರೈತರಲ್ಲಿ ತೀವ್ರ ರೀತಿಯ ಆಕ್ರೋಶಕ್ಕೆ ಕಾರಣವಾಗಿದೆ ಎಂದ ಅವರು, ಭತ್ತ ಬೆಳೆಯದೆ ಬೀಳು ಬಿಡಲಾದ ತಾಳಗುಂದ ಗ್ರಾಮದ ಸ.ನಂ 377,ಮಾಳಗೊಂಡನಕೊಪ್ಪ ಗ್ರಾಮದ ಸ.ನಂ 1901 ಮತ್ತಿತರ ಜಮೀನಿನಲ್ಲಿ ಭತ್ತ ಕಟಾವು ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯುತ ವರದಿ ನೀಡಿದ್ದಾರೆ.
ರೈತ ವರ್ಗವನ್ನು ಪರಿಹಾರದಿಂದ ವಂಚಿಸುವ ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದ ಅವರು, ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಸಾವಿರಾರು ರೈತರು ಬೆಳೆ ವಿಮೆ ಪರಿಹಾರದಿಂದ ವಂಚಿತರಾಗಲಿದ್ದು, ಈ ಬಗ್ಗೆ ರೈತರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕು. ತಪ್ಪಿದಲ್ಲಿ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಿ ಲೋಪಕ್ಕೆ ಸೂಕ್ತ ಕಠಿಣ ಕಾನೂನು ಕ್ರಮ ಜರಗಿಸಿ ಪುನರ್ ಸಮೀಕ್ಷೆ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ತಹಶೀಲ್ದಾರ್ ಶಿವಕುಮಾರ್ ಮಾತನಾಡಿ, ಸರಕಾರಕ್ಕೆ ಬೆಳೆ ಕಟಾವು ಮಾಡಲಾಗಿದೆ ಎಂದು ವರದಿ ನೀಡಿದ ಅಧಿಕಾರಿಗಳ ಹೇಳಿಕೆಯನ್ನು ಪಡೆಯಲಾಗಿದ್ದು, ಮೇಲ್ನೋಟಕ್ಕೆ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಲೋಪವೆಸಗಿದ ರಂಗನಾಥ, ಶರಣಯ್ಯನವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸಿಗೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿ ಸಭೆಯ ನಿರ್ಣಯವನ್ನು ಲಿಖಿತವಾಗಿ ದಾಖಲಿಸಿ ಹಾಜರಿದ್ದ ರೈತರ ಸಹಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭಾಕರ್,ತೋಟಗಾರಿಕೆ ಇಲಾಖೆಯ ವನಮಾಲ,ಮುಖಂಡ ಗುರುಮೂರ್ತಿ,ಕೊಳಗಿ ರೇವಣಪ್ಪ, ತಾಪಂ ಸದಸ್ಯ ಶಂಭು,ರೈತ ಮುಖಂಡ ಸದಾಶಿವಪ್ಪಗೌಡ,ಶಾಂತೇಶಪ್ಪ,ಆನಂದಪ್ಪ, ಸತೀಶ,ಪ್ರಕಾಶ್, ಶ್ರವಣಕುಮಾರ,ಹಾಲನಗೌಡ,ರಾಜೀವ,ಉಳಿವೆಪ್ಪ,ಪಾಲಾಕ್ಷಪ್ಪ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕಾಪ್ಟನ್‌ಃ- ಶಿಕಾರಿಪುರ ತಾಪಂ ಸಭಾಂಗಣದಲ್ಲಿ ಬೆಳೆವಿಮೆ ಪರಿಹಾರದಿಂದ ವಂಚಿತರಾದ ತಾಲೂಕಿನ ನರಸಾಪುರ, ತಾಳಗುಂದ, ಅಗ್ರಹಾರ ಮುಚುಡಿ ಗ್ರಾಮಸ್ಥರ ಮುಖಂಡರ ಜತೆ ಅಧಿಕಾರಿಗಳು ಚರ್ಚಿಸಿದರು.







