ತುಂಗಾ ಡ್ಯಾಂ ಭರ್ತಿಗೆ ಬೇಕು ಎರಡು ಅಡಿ ನೀರು!
ಮಲೆನಾಡಿನಲ್ಲಿ ಮುಂದುವರಿದ ಮಳೆ
ಶಿವಮೊಗ್ಗ, ಜೂ.23: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಬಹುತೇಕ ಎಲ್ಲೆಡೆ ಸಾಧಾರಣ ಮಳೆಯಾಗುತ್ತಿದೆ. ಆದರೆ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಪ್ರಮುಖ ಜಲಾಶಯಗಳ ಒಳಹರಿ ವಿನಲ್ಲಿ ಏರಿಕೆ ಕಂಡುಬಂದಿದೆ. ತುಂಗಾ ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ ಎರಡು ಅಡಿ ನೀರು ಸಂಗ್ರಹವಾಗಬೇಕಾಗಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಗುರುವಾರ ಬೆಳಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿಯ ಪ್ರಮಾಣ 12.86 ಮಿ.ಮೀ.ನಷ್ಟಾಗಿದೆ. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ 12.40 ಮಿ.ಮೀ., ಭದ್ರಾವತಿ 4 ಮಿ.ಮೀ., ತೀರ್ಥಹಳ್ಳಿ 19.20 ಮಿ.ಮೀ., ಸಾಗರ 16.20 ಮಿ.ಮೀ., ಶಿಕಾರಿಪುರದಲ್ಲಿ 7.40 ಮಿ.ಮೀ., ಸೊರಬದಲ್ಲಿ 7.50 ಮಿ.ಮೀ. ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಅತ್ಯಧಿಕ 23.30 ಮಿ.ಮೀ. ವರ್ಷಧಾರೆಯಾಗಿದೆ. ಡ್ಯಾಂ ವಿವರ: ಜಲಾನಯನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆ ಚುರುಕುಗೊಂಡಿರುವುದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಗುರುವಾರ ಬೆಳಗ್ಗೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಸಾಗರ ತಾಲೂಕಿನ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1,754.10 (ಗರಿಷ್ಠ ಮಟ್ಟ: 1,819) ಅಡಿಯಿದೆ. 1,807 ಕ್ಯೂಸೆಕ್ಸ್ ಒಳಹರಿವಿದ್ದು, 3,759 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 17.20 ಮಿ.ಮೀ. ಮಳೆಯಾಗಿದೆ. ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ 114.40 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದೆ. 1,991 ಕ್ಯೂಸೆಕ್ಸ್ ಒಳಹರಿವಿದ್ದು, 93 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 7.60 ಮಿ.ಮೀ. ವರ್ಷದಾರೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 142.70 ಅಡಿ ನೀರು ಸಂಗ್ರಹವಾಗಿತ್ತು. ಭರ್ತಿಯ ಹಂತಕ್ಕೆ : ಕಡಿಮೆ ನೀರು ಸಂಗ್ರಹಣ ಸಾಮರ್ಥ್ಯ, ಸೀಮಿತ ವ್ಯಾಪ್ತಿ-ವಿಸ್ತೀರ್ಣ ಹೊಂದಿರುವ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯವು ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಸಾಧಾರಣ ಮಳೆಗೆ ಭರ್ತಿಯ ಹಂತಕ್ಕೆ ಬಂದಿದೆ!
ಕೃಷಿ ಚುರುಕು
: ಜೂನ್ ತಿಂಗಳ ಮೊದಲ ಭಾಗದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದವು. ನಂತರ ಮಳೆ ಸಂಪೂರ್ಣವಾಗಿ ಕೈಕೊಟ್ಟಿತ್ತು. ಬಿಸಿಲು ಬೀಳಲಾರಂಭಿಸಿತ್ತು. ಇದು ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮತ್ತೆ ಮುಂಗಾರು ಮಳೆ ಚುರುಕುಗೊಂಡಿರುವುದು ರೈತ ಸಮೂಹದಲ್ಲಿ ಸಂತಸ ಉಂಟು ಮಾಡಿದೆ. ಧಾರಾಕಾರ ನಿರೀಕ್ಷೆ?: ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾ ಗುತ್ತಿದ್ದರೂ ಬಿರುಸು ಕಡಿಮೆಯಿದೆ. ಧಾರಾಕಾರ, ಜಡಿಮಳೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಧಾರಾ ಕಾರ ವರ್ಷಧಾರೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆಯ ಮೂಲಗಳು ತಿಳಿಸುತ್ತವೆ.







