ಕೃಷಿ ಜೊತೆ ಪಶುಸಂಗೋಪನೆ ಮಾಡಲು ರೈತರಿಗೆ ಕರೆ
ಚಿಕ್ಕಮಗಳೂರು, ಜೂ.23: ಕೃಷಿ ಚಟುವಟಿಕೆಯ ಜೊತೆಯಲ್ಲಿ ಪಶುಸಂಗೋಪನೆ ಮಾಡುವುದರಿಂದ ಆರ್ಥಿಕ ಲಾಭಗಳಿಸಲು ಸಾಧ್ಯ ಎಂದು ಗ್ರಾಪಂ ಅಧ್ಯಕ್ಷ ಸಿ.ಬಸವರಾಜನಾಯ್ಕ ಕರೆ ನೀಡಿದರು. ಅವರು ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕರಡಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಅಭಿಯಾನ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಹೋಬಳಿ ಮಟ್ಟದಲ್ಲಿ 2 ದಿನಗಳ ಕಾಲ ಕೃಷಿ ರಥದ ಮೂಲಕ ಎಲ್ಲಾ ಪಂಚಾಯತ್‌ಗಳಲ್ಲಿ ಇಲಾಖೆಗಳ ಯೋಜನೆಗಳನ್ನು ರೈತರ ಬಾಗಿಲಿಗೆ ತಲುಪಿಸಿ, ನಂತರ 3ನೆ ದಿನದಲ್ಲಿ ಹೋಬಳಿ ಮಟ್ಟದಲ್ಲಿ ಇಲಾಖಾ ಮುಖ್ಯಸ್ಥರು ಹಾಗೂ ವಿಜ್ಞಾನಿಗಳೊಡನೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದು ವಿಶಿಷ್ಟವಾಗಿದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಸಸ್ಯ ರೋಗ ಶಾಸ್ತ್ರದ ತಜ್ಞರಾದ ಡಾ. ಗಣೇಶ್ ನಾಯ್ಕ ಮಾತನಾಡಿ, ತೆಂಗಿನಲ್ಲಿ ಬರುವ ನುಸಿ ಪೀಡೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆಯಲ್ಲಿ ಕೊಳೆ ರೋಗದ ನಿರ್ವಹಣೆಯ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು. ತಾಪಂ ಸದಸ್ಯ ಎಚ್.ಡಿ ಹಾಲಾನಾಯ್ಕ ಇವರು ಕೃಷಿ ಇಲಾಖೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ತಾಪಂ ಉಪಾಧ್ಯಕ್ಷೆ ಶಿವಮ್ಮ ಟಿ. ಕೃಷ್ಣಮೂರ್ತಿ ಮಣ್ಣು ಆರೋಗ್ಯ ಚೀಟಿಯನ್ನು ರೈತರಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕೆ.ಜಿ. ರಾಧಾ ಶಿವಕುಮಾರ್ ಕೃಷಿ ಅಧಿಕಾರಿ ಎಸ್.ಬಿ ಮಹೇಶ್, ಸಹಾಯಕ ಕೃಷಿ ಅಧಿಕಾರಿ ಎಫ್.ಬಿ. ಬಾವಣ್ಣನವರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.





