ಮಡಿಕೇರಿ: ವಿನೂತನ ಪ್ರತಿಭಟನೆ

ಮಡಿಕೇರಿ, ಜೂ.23: ದೂರು ನೀಡಲು ಹೋದ ತನ್ನ ಮೇಲೆ ನಗರ ಠಾಣಾ ಪೊಲೀಸರಿಂದ ಹಲ್ಲೆಯಾಗಿದೆಯೆಂದು ಆರೋಪಿಸುವ ಮೂಲಕ ಕೆಲವು ದಿನಗಳ ಹಿಂದೆ ಸುದ್ದಿಯಾಗಿದ್ದ ಸುದರ್ಶನ್ ಬಡಾವಣೆಯ ನಿವಾಸಿ ಸಂದೀಪ್ ಇದೀಗ ಮತ್ತೊಮ್ಮೆ ವಿಚಿತ್ರ ರೀತಿಯ ಪ್ರತಿಭಟನೆಯ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ನಗರದ ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಒಂದೆರಡು ಬ್ಯಾನರ್‌ಗಳನ್ನು ಅಳವಡಿಸಿ ದಿಢೀರ್ ಪ್ರತಿಭಟನೆಗೆ ಇಳಿದ ಸಂದೀಪ್, ಚಾಕಲೇಟಿಸಂ ಎಂದು ಹೇಳಿಕೊಳ್ಳುತ್ತಾ ಸಾರ್ವಜನಿಕರಿಗೆ ಚಾಕಲೇಟ್‌ಗಳನ್ನು ಹಂಚುವ ಪ್ರಯತ್ನ ಮಾಡಿದರು. ಈತನ ವಿಚಿತ್ರ ವರ್ತನೆಯಿಂದ ಕೆಲವು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಸುರಿಯುತ್ತಿದ್ದ ಮಳೆಯ ನಡುವೆ ವಾಹನ ದಟ್ಟಣೆೆಯನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಯಾವುದೇ ಸಮಸ್ಯೆಗಳಿದ್ದರೂ ಠಾಣೆಗೆ ಬಂದು ಮಾತನಾಡುವಂತೆ ಪೊಲೀಸರು ಮಾಡಿದ ಮನವಿ ವಿಫಲವಾಯಿತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ, ಸಂದೀಪ್‌ನ ಮನವೊಲಿಸಿ ಠಾಣೆಗೆ ಬಂದು ಮಾತನಾಡುವಂತೆ ತಿಳಿಸಿದರು. ನಂತರ ತನ್ನ ಬಳಿಯಲ್ಲಿದ್ದ ಚಾಕೊಲೇಟ್‌ಗಳನ್ನು ರಸ್ತೆಯಲ್ಲೇ ಹಾಕಿ ಸ್ಥಳದಿಂದ ತೆರಳಿದ ಸಂದೀಪ್ ಸ್ವಲ್ಪಹೊತ್ತಿನ ನಂತರ ಮಾಧ್ಯಮಗಳೆದುರು ಪ್ರತ್ಯಕ್ಷನಾಗಿ, ಈ ಹಿಂದೆ ನನ್ನ ಮೇಲೆ ಪೊಲೀಸರಿಂದ ಹಲ್ಲೆಯಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಭಟನೆ ನಡೆಸುತ್ತಿಲ್ಲ. ರಾಜ್ಯದ ಪೊಲೀಸ್ ವ್ಯವಸ್ಥೆ ಬದಲಾಗಬೇಕಾಗಿದೆ. ಪೊಲೀಸರು ದೂರು ನೀಡಲು ಹೋದವರ ಬಳಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ, ದೂರನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪೊಲೀಸ್ ಇಲಾಖೆಯಲ್ಲಿರುವ ಅವ್ಯವಸ್ಥೆ ಸುಧಾರಣೆಯ ಕೆಲವು ಅಂಶಗಳನ್ನು ಬ್ಯಾನರ್ ನಲ್ಲಿ ಅಳವಡಿಸಿ ಸಾರ್ವಜನಿಕರ ಗಮನ ಸೆಳೆದಿದ್ದೇನೆ. ಉಪ್ಪಿನ ಋಣ ತೀರಿಸಲಾಗದು, ಅದೇ ರೀತಿ ಸಿಹಿಯ ಋಣ ತೀರಿಸಲಾಗದು ಎನ್ನುವ ಕಾರಣಕ್ಕಾಗಿ ಚಾಕಲೇಟ್‌ಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇನೆ ಎಂದು ಸಂದೀಪ್ ತಿಳಿಸಿದರು.







