ಭಾರತದ ನೂತನ ಕೋಚ್ ಕುಂಬ್ಳೆಯ ವೃತ್ತಿಜೀವನದ ಸ್ಮರಣೀಯ ಕ್ಷಣಗಳು

ಹೊಸದಿಲ್ಲಿ, ಜೂ.23: ಭಾರತದ ಮಾಜಿ ನಾಯಕ ಹಾಗೂ ಅತ್ಯಂತ ಯಶಸ್ವಿ ಬೌಲರ್ ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ಗುರುವಾರ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ನೇಮಕ ಮಾಡಿದೆ. ಜುಲೈನಲ್ಲಿ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಕುಂಬ್ಳೆ ಮೊದಲ ಬಾರಿ ಕೋಚ್ ನೀಡಲಿದ್ದಾರೆ.
ಭಾರತದ ಪರ ಟೆಸ್ಟ್(619) ಹಾಗೂ ಏಕದಿನ(337) ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಸಂಪಾದಿಸಿರುವ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ವೃತ್ತಿಜೀವನದ ಐದು ಸ್ಮರಣೀಯ ಕ್ಷಣಗಳ ಸಿಂಹಾವಲೋಕನ ಇಂತಿದೆ.
10ಕ್ಕೆ 10
ಫೆಬ್ರವರಿ 7,1999ರಲ್ಲಿ ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಕುಂಬ್ಳೆ ಅವರು ಟೆಸ್ಟ್ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಎರಡನೆ ಬೌಲರ್ ಎನಿಸಿಕೊಂಡಿದ್ದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ ಈ ಸಾಧನೆ ಮಾಡಿದ್ದರು. ಭಾರತಕ್ಕೆ ಸರಣಿಯನ್ನು ಸಮಬಲಗೊಳಿಸಲು ಆ ಪಂದ್ಯವನ್ನು ಗೆಲ್ಲಬೇಕಾಗಿತ್ತು. 420 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಅಂತಿಮ ದಿನದಾಟದಲ್ಲಿ ಪಂದ್ಯವನ್ನು ಡ್ರಾಗೊಳಿಸುವ ವಿಶ್ವಾಸದಲ್ಲಿತ್ತು. ಆದರೆ, 74 ರನ್‌ಗೆ ಪಾಕ್‌ನ ಎಲ್ಲ 10 ವಿಕೆಟ್‌ಗಳನ್ನು ಉಡಾಯಿಸಿದ್ದ ಕುಂಬ್ಳೆ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದರು
ಅದು ಲೆಗ್ ಸ್ಪಿನ್ನರ್ ಕುಂಬ್ಳೆಗೆ ಮರೆಯಲಾರದ ಕ್ಷಣವಾಗಿತ್ತು. ಮೇ 2002ರಲ್ಲಿ ಸೈಂಟ್‌ಜಾನ್ಸ್‌ನಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ನಾಲ್ಕನೆ ಟೆಸ್ಟ್‌ನ ಮೂರನೆ ದಿನದಾಟದಲ್ಲಿ ಕುಂಬ್ಳೆ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ದವಡೆಗೆ ತಗಲಿ ಗಾಯವಾಗಿತ್ತು. ದವಡೆಗೆ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ ಕುಂಬ್ಳೆ 14 ಓವರ್‌ಗಳ ಸ್ಪೆಲ್‌ನಲ್ಲಿ ಚಾಂಪಿಯನ್ ದಾಂಡಿಗ ಬ್ರಿಯಾನ್ ಲಾರಾ ವಿಕೆಟ್ ಪಡೆದಿದ್ದರು.
ಆಗ ಕುಂಬ್ಳೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸುನಿಲ್ ಗವಾಸ್ಕರ್, ಕುಂಬ್ಳೆಯ ಕ್ರೀಡಾಸ್ಫೂರ್ತಿ ಎಲ್ಲರಿಗೂ ಮಾದರಿ ಎಂದು ಹೇಳಿದ್ದರು.
ಸೂಪರ್ ಸಿಕ್ಸ್
ನವೆಂಬರ್ 27,1993ರಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಹೀರೊ ಕಪ್ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ 12 ರನ್‌ಗೆ 6 ವಿಕೆಟ್ ಉರುಳಿಸಿದ ಕುಂಬ್ಳೆ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದರು. ಕುಂಬ್ಳೆ ಮಾಡಿದ್ದ ಆ ಸಾಧನೆಯನ್ನು 2014ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ(4ರನ್‌ಗೆ 6ವಿಕೆಟ್) ಸರಿಗಟ್ಟಿದ್ದರು.
ಕುಂಬ್ಳೆ ಅವರ ಅತ್ಯುತ್ತಮ ಬೌಲಿಂಗ್‌ನ ನೆರವಿನಿಂದ ಮುಹಮ್ಮದ್ ಅಝರುದ್ದೀನ್ ನೇತೃತ್ವದ ಭಾರತ ತಂಡ ವೆಸ್ಟ್‌ಇಂಡೀಸ್‌ನ್ನು 102 ರನ್‌ಗಳ ಅಂತರದಿಂದ ಸೋಲಿಸಿ ಕೋಲ್ಕತಾದ ಸುಮಾರು 1 ಲಕ್ಷ ಪ್ರೇಕ್ಷಕರ ಸಮ್ಮುಖದಲ್ಲಿ ಟ್ರೋಫಿ ಜಯಿಸಿತ್ತು. ಕುಂಬ್ಳೆ ತನ್ನ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. ಆ ಪಂದ್ಯದಲ್ಲಿ ವಿಂಡೀಸ್‌ನ ನಾಲ್ವರು ದಾಂಡಿಗರು ಕುಂಬ್ಳೆ ಸ್ಪಿನ್‌ಗೆ ಕ್ಲೀನ್‌ಬೌಲ್ಡಾಗಿದ್ದರು.
ಮೊದಲ ಹಾಗೂ ಕೊನೆಯ ಟೆಸ್ಟ್ ಶತಕ
ಕ್ರಿಕೆಟ್ ಅಂಗಳದಲ್ಲಿ ಯಾವಾಗಲೂ ವಿಕೆಟ್‌ಗಳನ್ನು ಉಡಾಯಿಸುತ್ತಿದ್ದ ಕುಂಬ್ಳೆ 2007ರಲ್ಲಿ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ತನ್ನ ತಾಕತ್ತು ತೋರಿಸಿ ಚೊಚ್ಚಲ ಶತಕ ಬಾರಿಸಿದ್ದರು.
ಕೊನೆಯ ದಾಂಡಿಗ ಶ್ರೀಶಾಂತ್ ಬ್ಯಾಟಿಂಗ್‌ಗೆ ಇಳಿದಿದ್ದಾಗ ಕುಂಬ್ಳೆ 97 ರನ್ ಗಳಿಸಿದ್ದರು. ಕೇವಿನ್ ಪೀಟರ್ಸನ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ಕುಂಬ್ಳೆ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಪೂರೈಸಿದರು. ಆಗ ಬ್ಯಾಟ್‌ನ್ನು ಎತ್ತಿಹಿಡಿದ ಕುಂಬ್ಳೆ ಮಗುವಿನಂತೆಯೇ ಸಂಭ್ರಮಪಟ್ಟಿದ್ದರು.
ಲೀಡ್ಸ್‌ನಲ್ಲಿ ಭಾರತಕ್ಕೆ ಗೆಲುವು
2002ರಲ್ಲಿ ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದ ಕುಂಬ್ಳೆ ಭಾರತ ಸರಣಿಯನ್ನು ಸಮಬಲಗೊಳಿಸಲು ಮಹತ್ವದ ಕಾಣಿಕೆ ನೀಡಿದ್ದರು. ಇಂಗ್ಲೆಂಡ್ ವಿರುದ್ಧ ಎರಡನೆ ಇನಿಂಗ್ಸ್‌ನಲ್ಲಿ ನಾಯಕ ನಾಸಿರ್ ಹುಸೈನ್ ಸಹಿತ ನಾಲ್ಕು ವಿಕೆಟ್ ಪಡೆದ ಕುಂಬ್ಳೆ ವಿದೇಶಿ ನೆಲದಲ್ಲೂ ಭಾರತ ಸರಣಿ ಗೆಲ್ಲಲು ಸಮರ್ಥವಿದೆ ಎಂದು ತೋರಿಸಿಕೊಟ್ಟಿದ್ದರು.
ಕುಂಬ್ಳೆ ಸಾಧನೆ
-132 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಂಬ್ಳೆ ಒಟ್ಟು 619 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ ದಿಲ್ಲಿಯಲ್ಲಿ 74 ರನ್‌ಗೆ 10 ವಿಕೆಟ್ ಸ್ಮರಣೀಯ ಇನಿಂಗ್ಸ್ ಆಗಿದೆ. 35 ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಕುಂಬ್ಳೆ 1 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ.
-ಗರಿಷ್ಠ ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(800) ಹಾಗೂ ಆಸ್ಟ್ರೇಲಿಯದ ಲೆಗ್ ಸ್ಪಿನ್ ಲೆಜಂಡ್ ಶೇನ್ ವಾರ್ನ್(708) ಬಳಿಕ ಮೂರನೆ ಸ್ಥಾನದಲ್ಲಿದ್ದಾರೆ.
-271 ಏಕದಿನಗಳಲ್ಲಿ 337 ವಿಕೆಟ್ ಪಡೆದಿದ್ದಾರೆ. 12ಕ್ಕೆ 6 ವಿಕೆಟ್ ವಿಕೆಟ್ ಶ್ರೇಷ್ಠ ಬೌಲಿಂಗ್ ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 1136 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
-ಕುಂಬ್ಳೆ 1995ರಲ್ಲಿ ಅರ್ಜುನ ಪ್ರಶಸ್ತಿ, 1996ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
-2012ರಲ್ಲಿ ಐಸಿಸಿ ಕ್ರಿಕೆಟ್ ಸಮಿತಿಯ ಚೇರ್‌ಮನ್ ಆಗಿ ಆಯ್ಕೆಯಾಗಿದ್ದರು. ಇತ್ತೀಚೆಗಿನವರೆಗೆ ಈ ಹುದ್ದೆಯಲ್ಲಿದ್ದರು.
-1990 ರಿಂದ 2008ರ ತನಕ 18 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮಿಂಚಿದ್ದ ಸ್ಪಿನ್ ಲೆಜಂಡ್ ಕುಂಬ್ಳೆ 2015ರಲ್ಲಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದರು.
-ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ಕುಂಬ್ಳೆ ‘ಮಂಕಿಗೇಟ್’ ಪ್ರಕರಣದಿಂದ ಸುದ್ದಿಯಾಗಿದ್ದ ಪರ್ತ್ ಟೆಸ್ಟ್ ಪಂದ್ಯವನ್ನು ಜಯಿಸಿದ್ದು ಸ್ಮರಣೀಯ ಕ್ಷಣವಾಗಿದೆ.







