ಯುರೋ ಕಪ್: ಪೋರ್ಚುಗಲ್-ಹಂಗೇರಿ ಪಂದ್ಯ 3-3 ಡ್ರಾ
ಡಚ್ಚರಿಗೆ ರೊನಾಲ್ಡೊ ಆಸರೆ

ಲಿಯೊನ್, ಜೂ.23: ಅವಳಿ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಹಂಗೇರಿ ವಿರುದ್ಧ 3-3 ಗೋಲುಗಳ ಅಂತರದಿಂದ ಡ್ರಾ ಸಾಧಿಸಲು ನೆರವಾದರು.
ಯುರೋ ಕಪ್‌ನ ಗ್ರೂಪ್ ಹಂತದ ಪಂದ್ಯಗಳು ಕೊನೆಗೊಂಡಿದ್ದು, ಐರ್ಲೆಂಡ್, ಬೆಲ್ಜಿಯಂ, ಐಸ್‌ಲೆಂಡ್ ಹಾಗೂ ಪೋರ್ಚುಗಲ್ ತಂಡಗಳು ಅಂತಿಮ-16ರ ಸುತ್ತಿನಲ್ಲಿ ಆತಿಥೇಯ ಫ್ರಾನ್ಸ್, ವೇಲ್ಸ್, ಜರ್ಮನಿ, ಕ್ರೊಯೇಷಿಯಾ, ಇಟಲಿ, ಸ್ವಿಟ್ಝರ್ಲೆಂಡ್, ಇಂಗ್ಲೆಂಡ್, ಪೊಲೆಂಡ್, ಸ್ಪೇನ್, ಸ್ಲೊವಾಕಿಯ, ಉತ್ತರ ಐರ್ಲೆಂಡ್ ಹಾಗೂ ಹಂಗೇರಿ ತಂಡವನ್ನು ಸೇರ್ಪಡೆಯಾಗಲಿವೆ.
ಬುಧವಾರ ನಡೆದ ಎಫ್ ಗುಂಪಿನ ಪಂದ್ಯದಲ್ಲಿ 17ನೆ ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್ ಪಂದ್ಯವನ್ನು ಆಡಿ ಹೊಸ ದಾಖಲೆ ನಿರ್ಮಿಸಿದ ರೊನಾಲ್ಡೊ 50 ಹಾಗೂ 62ನೆ ನಿಮಿಷದಲ್ಲಿ ಗೋಲು ಬಾರಿಸಿ ಪೋರ್ಚುಗಲ್ ತಂಡ ಡ್ರಾ ಸಾಧಿಸಲು ಪ್ರಮುಖ ಕಾಣಿಕೆ ನೀಡಿದರು. ಹಂಗೇರಿಯದ ನಾಯಕ ಬಲಾಝ್ ಡಸುಡಸಕ್ 47ನೆ ಹಾಗೂ 55ನೆ ನಿಮಿಷದಲ್ಲಿ ಗೋಲು ಬಾರಿಸಿದರು.
19ನೆ ನಿಮಿಷದಲ್ಲಿ ಗೋಲು ಬಾರಿಸಿದ ಝಾಲ್ಟನ್ ಗೇರಾ ಹಂಗೇರಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 42ನೆ ನಿಮಿಷದಲ್ಲಿ ಗೋಲುಬಾರಿಸಿದ ಗೇರಾ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. 47 ಹಾಗೂ 55ನೆ ನಿಮಿಷದಲ್ಲಿ ಗೋಲು ಬಾರಿಸಿದ ಬಲಾಝ್ ಹಂಗೇರಿಯಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಆಗ ತಂಡದ ರಕ್ಷಣೆಗೆ ಮುಂದಾದ ರೊನಾಲ್ಡೊ 50ನೆ ಹಾಗೂ 62ನೆ ನಿಮಿಷದಲ್ಲಿ ಅವಳಿ ಗೋಲು ಬಾರಿಸಿ 3-3 ಅಂತರದಿಂದ ಡ್ರಾ ಸಾಧಿಸಲು ಪ್ರಮುಖ ಪಾತ್ರವಹಿಸಿದರು.
ಪೋರ್ಚುಗಲ್ ವಿರುದ್ಧ ಪಂದ್ಯವನ್ನು ಡ್ರಾ ಗೊಳಿಸಿದ ಹಂಗೇರಿ ಎಫ್ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದ್ದು, ಮುಂದಿನ ಸುತ್ತಿನಲ್ಲಿ ಇ ಗುಂಪಿನಲ್ಲಿ 2ನೆ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ. ಪೋರ್ಚುಗಲ್ ತಂಡ ಕ್ರೊಯೇಷಿಯಾ ತಂಡದೊಂದಿಗೆ ಸೆಣಸಾಡಲಿದೆ.
ಆಸ್ಟ್ರೀಯದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದ ಐಸ್‌ಲೆಂಡ್ ಯುರೋ ಕಪ್‌ನಲ್ಲಿ ಮೊದಲ ಬಾರಿ ನಾಕೌಟ್ ಹಂತಕ್ಕೇರಿದೆ. ಐಸ್‌ಲೆಂಡ್ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಇಟಲಿ ವಿರುದ್ಧ 1-0 ಗೋಲು ಅಂತರದಿಂದ ಜಯ ಸಾಧಿಸಿದ ರಿಪಬ್ಲಿಕ್ ಐರ್ಲೆಂಡ್ ತಂಡ ಹಾಗೂ ಸ್ವೀಡನ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿರುವ ಬೆಲ್ಜಿಯಂ ತಂಡ ಅಂತಿಮ 16ರ ಸುತ್ತಿಗೆ ತೇರ್ಗಡೆಯಾಗಿವೆ. ಐರ್ಲೆಂಡ್ ತಂಡ 1994ರ ವಿಶ್ವಕಪ್‌ನ ಬಳಿಕ ಇದೇ ಮೊದಲ ಬಾರಿ ಇಟಲಿ ತಂಡವನ್ನು ಪ್ರಮುಖ ಟೂರ್ನಿಯೊಂದರಲ್ಲಿ ಮಣಿಸಿದೆ. ಸ್ವೀಡನ್‌ನ ಸ್ಟಾರ್ ಆಟಗಾರ ಝ್ಲಾಟನ್ ಇಬ್ರಾಹಿಮೊವಿಕ್ ಸೋಲಿನೊಂದಿಗೆ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
‘‘ಇದು ಸ್ವೀಡನ್‌ಪರ ನಾನು ಆಡಿದ ಕೊನೆಯ ಪಂದ್ಯ. ನನ್ನಲ್ಲಿ ಸಾಕಷ್ಟು ಸ್ಮರಣೀಯ ಕ್ಷಣಗಳಿವೆ. ಹೆಮ್ಮೆಯಿಂದ ಫುಟ್ಬಾಲ್‌ಗೆ ವಿದಾಯ ಹೇಳುತ್ತಿರುವೆ’’ಎಂದು 34ರ ಹರೆಯದ ಇಬ್ರಾಹಿಮೊವಿಕ್ ಹೇಳಿದ್ದಾರೆ.







