ಮಾದಕ ದ್ರವ್ಯ ಮಾರಾಟ: ಮಾಜಿ ಮಿಸ್ ಕರ್ನಾಟಕ ಸೆರೆ

ಬೆಂಗಳೂರು, ಜೂ. 23: ಸ್ನೇಹಿತರ ಜೊತೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರೂಪದರ್ಶಿಯೊಬ್ಬರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ಅಧಿಕಾರಿಗಳು ಬಂಧಿಸಿದ್ದಾರೆ.
ಇಲ್ಲಿನ ಆರ್‌ಟಿ ನಗರ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ಮೂಲದ ರೂಪದರ್ಶಿ ಹಾಗೂ 2014ರ ಮಿಸ್ ಕರ್ನಾಟಕ ದರ್ಶಿತ್‌ಮಿಶ್ರಾ (26) ಎಂಬಾಕೆಯನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧನದಲ್ಲಿರುವ ದರ್ಶಿತ್‌ಮಿಶ್ರಾ ನಗರದಲ್ಲಿ ಮಾಡೆಲಿಂಗ್ ವೃತ್ತಿಯಲ್ಲಿ ಸಕ್ರಿಯರಾಗಿದ್ದರು. ಪ್ರಕರಣ ಸಂಬಂಧ ಮಾದಕ ವಸ್ತು ಮಾರಾಟ ಜಾಲದಲ್ಲಿ ಈಕೆಯ ಗೆಳೆಯ ಅಬ್ದುಲ್ ಖಾದರ್ ಎಂಬಾತನನ್ನು 2015ರ ನವೆಂಬರ್‌ನಲ್ಲಿ ಎಸ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಪ್ರಕರಣದಲ್ಲಿ ರೂಪದರ್ಶಿಯ ಪಾತ್ರವಿರುವುದನ್ನೂ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಬಾಲ್ಯ ಸ್ನೇಹಿತರಾದ ಖಾದರ್ ಹಾಗೂ ರೂಪದರ್ಶಿ, ಆರ್.ಟಿ.ನಗರದಲ್ಲಿ ಒಟ್ಟಿಗೇ ವಾಸವಾಗಿದ್ದರು. ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನೆ ವೃತ್ತಿ ಮಾಡಿಕೊಂಡಿದ್ದ ಖಾದರ್ ವಿರುದ್ಧ ಮಂಗಳೂರು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನ್ನೆಲೆ: ಖಾದರ್ ಬಂಧನ ಮಾಡಿದ ಎನ್‌ಸಿಬಿ, 110 ಗ್ರಾಂ ಕೊಕೈನ್, 19 ಗ್ರಾಂ ಹ್ಯಾಶಿಶ್, 1.2 ಗ್ರಾಂ ಎಂಡಿಎಂ ಮತ್ತು 1 ಗ್ರಾಂ ಎಲ್‌ಎಸ್‌ಡಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿತ್ತು. ಆದರೆ, ಆರೋಪಿ ದಂಧೆಯಲ್ಲಿ ಗೆಳತಿಯ ಪಾತ್ರವಿರುವ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ದಂಧೆಯಲ್ಲಿ ರೂಪದರ್ಶಿಯ ಕೈವಾಡವೂ ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ರೂಪದರ್ಶಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಮಂಗಳವಾರ ಕಚೇರಿಗೆ ಬಂದ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯಕ್ಕೆ ಸ್ನೇಹಿತನಿಗೆ ಸಹಕಾರ ನೀಡಿರುವುದು ಗೊತ್ತಾದ ಕಾರಣ ಆಕೆಯನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಮಾದಕ ವಸ್ತು ಮಾರಾಟ ಜಾಲದಲ್ಲಿ ಇಬ್ಬರು ಗೋವಾ ಹಾಗೂ ವಿದೇಶದಿಂದ ಮಾದಕ ವಸ್ತುಗಳನ್ನು ತಂದು, ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಎನ್‌ಸಿಬಿ ತನಿಖೆ ಮುಂದುವರಿಸಿದೆ.





