ಪೊಲೀಸರ ಮುಂದೆಯೇ ಬಿಜೆಪಿ ಮಾಜಿ ಶಾಸಕನಿಂದ ಪತ್ನಿ ಮೇಲೆ ಹಲ್ಲೆ: ಆರೋಪ
ಬೆಂಗಳೂರು, ಜೂ. 23: ಬಿಜೆಪಿ ಪಕ್ಷದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಸವಿತಾ ಆರೋಪಿಸಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆರು ತಿಂಗಳಿನಿಂದ ಮನೆಗೆ ಬಂದಿಲ್ಲ. ಈ ಸಂಬಂಧ ಕುಮಾರಸ್ವಾಮಿ ಬೆಂಗಳೂರಿನ ಶಾಸಕರ ಭವನದಲ್ಲಿರುವುದನ್ನು ಖಚಿತಪಡಿಸಿಕೊಂಡು ಗುರುವಾರ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗಿ, ಮನೆಗೆ ಬನ್ನಿ, ನೀವು ಯಾಕೆ ಮನೆಗೆ ಬಂದಿಲ್ಲ ಎಂದು ಪ್ರಶ್ನಿಸಿದೆ, ಆದರೆ, ಪತಿ ಕುಮಾರಸ್ವಾಮಿ ಯಾವುದೇ ಉತ್ತರ ನೀಡದೆ ಪೊಲೀಸರ ಎದುರೇ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿದರು. ಇನ್ನು ಪ್ರಕರಣ ಸಂಬಂಧ ಸ್ಥಳಕ್ಕೆ ಆಗಮಿಸಿದ ಶಾಸಕರ ಭವನ ಠಾಣಾ ಪೊಲೀಸರು ಮಾಜಿ ಶಾಸಕ ಹಾಗೂ ಪತಿ ಎಂ.ಪಿ. ಕುಮಾರಸ್ವಾಮಿ, ಪತ್ನಿ ಸವಿತಾ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲೂ ಎರಡು ಬಾರಿ ಸವಿತಾ ಮೇಲೆ ದೈಹಿಕ ಹಲ್ಲೆ ಮಾಡಿದರು ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?: ಮೂಡಿಗೆರೆ ಕ್ಷೇತ್ರ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಕುಮಾರಸ್ವಾಮಿ, ಬೇರೆ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ಪತ್ನಿ ಸವಿತಾ ಹಲವು ಬಾರಿ ಆರೋಪ ಮಾಡಿದ್ದರು. ಅದೇ ರೀತಿ, ಆರು ತಿಂಗಳ ಹಿಂದೆ ಹಾಸನ ಮೂಲದ ಮಹಿಳೆ ಜೊತೆಗಿನ ದೂರವಾಣಿ ಮಾತುಕತೆ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿತ್ತು. ತದನಂತರ ಕುಮಾರಸ್ವಾಮಿ ಮನೆಗೆ ಹೋಗಿರಲಿಲ್ಲ ಎನ್ನಲಾಗಿದೆ.
ಶಾಸಕರ ಭವನದಲ್ಲಿ ತಂಗಿರುವ ಮಾಹಿತಿ ಪಡೆದ ಪತ್ನಿ ಸವಿತಾ, ಮಧ್ಯಾಹ್ನ 3 ಗಂಟೆ ಸಂದರ್ಭ ಪತಿ ಕುಮಾರಸ್ವಾಮಿಯನ್ನು ಭೇಟಿ ಮಾಡಲು ಶಾಸಕರ ಭವನಕ್ಕೆ ಬಂದಿದ್ದರು. ಪತ್ನಿ ಮತ್ತವರ ಸಂಬಂಧಿಕರು ಬರುತ್ತಿದ್ದ ಮಾಹಿತಿ ಪಡೆದ ಕುಮಾರಸ್ವಾಮಿ, ಊಟವನ್ನೂ ಬಿಟ್ಟು ತಮ್ಮ ಕೊಠಡಿಗೆ ಬೀಗ ಹಾಕಿಕೊಂಡು ಓಡಿಹೋಗುವ ಪ್ರಯತ್ನ ನಡೆಸಿದ್ದಾರೆ. ಪತಿ ಓಡಿಹೋಗುವುದನ್ನು ಅರಿತ ಸವಿತಾ ಅವರ ಕಾರನ್ನು ತಡೆದು ನಿಲ್ಲಿಸಿದರು ಎಂದು ತಿಳಿದುಬಂದಿದೆ.





