ಸೊರಕೆ ಕಾರು ಅಪಘಾತ: ಅಪಾಯದಿಂದ ಪಾರು

ಉಡುಪಿ, ಜೂ.23: ಕಾಪು ಶಾಸಕ ಹಾಗೂ ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಗುರುವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತಕ್ಕೀಡಾಗಿದ್ದು, ಶಾಸಕರು ಸಹಿತ ಅವರ ಕುಟುಂಬಸ್ಥರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಮೂಡುಬೆಳ್ಳೆಯ ವಿಖ್ಯಾತ್ ಭಟ್ ಎಂಬವರ ಸ್ಕಾರ್ಪಿಯೋ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಇನ್ನೊಂದು ಬದಿಯ ರಸ್ತೆಗೆ ಬಂದು ಮೂರು ಪಲ್ಟಿಯಾಗಿ ಉಡುಪಿಯಿಂದ ಕಾಪು ಕಡೆ ಹೋಗುತ್ತಿದ್ದ ಶಾಸಕ ವಿನಯ ಕುಮಾರ್ ಸೊರಕೆ ಕಾರಿಗೆ ಢಿಕ್ಕಿ ಹೊಡೆಯಿತು.
ಅಪಘಾತದಿಂದ ಸ್ಕಾರ್ಪಿಯೋ ಕಾರು ಸಂಪೂರ್ಣ ಹಾಗೂ ಶಾಸಕರ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ವಿನಯ ಕುಮಾರ್ ಸೊರಕೆ, ಚಾಲಕ ಸೇರಿ ಒಟ್ಟು ನಾಲ್ಕು ಮಂದಿ ಇದ್ದರು. ಎರಡು ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೊರಕೆ ಅಜ್ಜರಕಾಡಿನಲ್ಲಿರುವ ತನ್ನ ಮನೆಯಿಂದ ಕಾಪುವಿನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಭೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಂತರ ಅವರು ಬೇರೆ ಕಾರಿನಲ್ಲಿ ಕಾಪುವಿಗೆ ತೆರಳಿದರು. ಅಪಘಾತದಿಂದ ರಸ್ತೆ ಸಂಚಾರ ವ್ಯತ್ಯಯಗೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಸಂಚಾರ ಪೊಲೀಸರು ಎರಡು ಕಾರುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.





