ಮುದ್ದೇಬಿಹಾಳ: ಹಾಡಹಗಲೇ ಶಿಕ್ಷಕನ ಮನೆಗೆ ನುಗ್ಗಿ 3.18 ಲಕ್ಷ ರೂ.ಕಳ್ಳತನ

ಮುದ್ದೇಬಿಹಾಳ, ಜೂ.23: ಹಾಡಹಗಲೇ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಕಾರ್‌ನ ಗಾಜು ಒಡೆದು ಗುತ್ತಿಗೆದಾರರೊಬ್ಬರ ಹಣ ಕಳ್ಳತನದ ಘಟನೆ ಇನ್ನೂ ಹಸಿರಾಗಿರುವಂತೆಯೇ ಪಟ್ಟಣದಲ್ಲಿ ಮತ್ತೊಂದು ಹಾಡುಹಗಲೇ ಕಳ್ಳತನ ನಡೆದಿದ್ದು ಸಾರ್ವಜನಿಕರನ್ನು ತಲ್ಲಣಗೊಳಿಸಿದೆ.
ಪಟ್ಟಣದ ಖಾಸಗಿ ಶಾಲಾ ಶಿಕ್ಷಕರೊಬ್ಬರು ಬ್ಯಾಂಕ್‌ನಿಂದ ಆಗ ತಾನೇ ಡ್ರಾ ಮಾಡಿಕೊಂಡು ಮನೆಯಲ್ಲಿ ತಂದಿಟ್ಟಿದ್ದ ಹಣವನ್ನು ಹಾಡಹಗಲೇ ಕಳ್ಳರಿಬ್ಬರು ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಬಸವ ನಗರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಬಸವನಗರದ ರಸ್ತೆ ಪಕ್ಕದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕ ಬಸವರಾಜ ಗುರುಪಾದಪ್ಪ ಅಸ್ಕಿ ಎಂಬುವರೇ ಹಣ ಕಳೆದುಕೊಂಡವರು. ಯೂನಿಯನ್ ಬ್ಯಾಂಕ್‌ನಿಂದ ಮಧ್ಯಾಹ್ನ 1:30ರ ಸುಮಾರಿಗೆ ಬಂಗಾರದ ಆಭರಣಗಳನ್ನಿಟ್ಟು ಸಾಲವಾಗಿ ಪಡೆದುಕೊಂಡಿದ್ದ 3.18 ಲಕ್ಷ ರೂ.ಹಣವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಹಣದ ಚೀಲವನ್ನು ಮನೆಯ ಹೊರಕೋಣೆಯಲ್ಲಿದ್ದ ಟ್ರೆಝರಿ ಪಕ್ಕದಲ್ಲಿಟ್ಟು ಮುಖ ತೊಳೆಯಲು ಹೋಗಿದ್ದರು. ಈ ವೇಳೆ ಏಕಾಏಕಿ ಮನೆಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಟ್ರೆಝರಿ ಪಕ್ಕದಲ್ಲಿದ್ದ ಹಣದ ಬ್ಯಾಗನ್ನು ಎತ್ತಿಕೊಂಡು ತನ್ನೊಂದಿಗೆ ಬಂದಿದ್ದ ಇನ್ನೊಬ್ಬನೊಂದಿಗೆ ಪರಾರಿಯಾಗಿದ್ದಾನೆ ಎಂದು ಶಿಕ್ಷಕ ಬಸವರಾಜ ಅಸ್ಕಿ ತಿಳಿಸಿದ್ದಾರೆ. ಬ್ಯಾಗ್ ತೆಗೆದುಕೊಂಡು ಹೋಗುವ ಸಪ್ಪಳ ಕೇಳುತ್ತಿದ್ದಂತೆ ಬಸವರಾಜ ಹೊರಗೆ ಓಡಿ ಬಂದಿದ್ದಾರೆ. ಅಲ್ಲದೇ ಬೈಕ್ ಏರಿಕೊಂಡು ಬ್ಯಾಗ್ ಕಳುವು ಮಾಡಿಕೊಂಡು ಹೊರಟಿದ್ದ ಕಳ್ಳರನ್ನು ಕಂಡು ಜೋರಾಗಿ ಕಿರುಚಿದ್ದಾರೆ. ಮಧ್ಯಾಹ್ನದ ಹೊತ್ತಾಗಿದ್ದರಿಂದ ಜನಸಂಚಾರ ವಿರಳವಾಗಿದ್ದು ಅವರು ಕೂಗಿದರೂ ಯಾರೊಬ್ಬರೂ ಅವರನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ.
ಹಣ ತೆಗೆದುಕೊಂಡು ಪರಾರಿಯಾದ ವಿಷಯವನ್ನು ಕೂಡಲೇ ಶಿಕ್ಷಕ ಬಸವರಾಜ ಅಸ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು ತನಿಖೆ ಮುಂದುವರೆದಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಕೆ.ಎಸ್.ಹಟ್ಟಿ, ಪಟ್ಟಣದಿಂದ ಹೊರಹೋಗುವ ಎಲ್ಲ ರಸ್ತೆಗಳಲ್ಲಿ ತಕ್ಷಣ ನಾಕಾಬಂದಿ ಮಾಡಿದರೂ ಆರೋಪಿಗಳು ಪತ್ತೆಂಾಗಲಿಲ್ಲ.ಅಲ್ಲದೇ ಹಣ ಕಳೆದಕೊಂಡ ಬಸವರಾಜ ಅವರನ್ನು ಯೂನಿಯನ್ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದರೂ ಹಣ ಕಳುವು ಮಾಡಿಕೊಂಡು ಹೋದ ವ್ಯಕ್ತಿಗಳು ಇವರ ಹಿಂದಿರುವ ಬಗ್ಗೆ ಯಾವ ಸಂಶಯಾಸ್ಪದ ದೃಶ್ಯಗಳು ಕಂಡು ಬರಲಿಲ್ಲ ಎಂದು ಹೇಳಿದರು.







