ವಿವಾದಾಸ್ಪದ ಜಲಪ್ರದೇಶದಲ್ಲಿ ಇಂಡೋನೇಶ್ಯ ಅಧ್ಯಕ್ಷರ ನೌಕಾಯಾನ
ಚೀನಾಕ್ಕೆ ಸಡ್ಡು
ಜಕಾರ್ತ, ಜೂ. 23: ದಕ್ಷಿಣ ಚೀನಾ ಸಮುದ್ರದ ದಕ್ಷಿಣದ ಭಾಗದಲ್ಲಿನ ಪ್ರದೇಶದ ಮೇಲೆ ಸಾರ್ವಭೌಮತ್ವ ಸ್ಥಾಪಿಸುವ ದಿಟ್ಟ ಕ್ರಮವೆಂಬಂತೆ, ಇಂಡೋನೇಶ್ಯದ ಅಧ್ಯಕ್ಷ ಜೊಕೊ ವಿಡೋಡೊ ಗುರುವಾರ ಯುದ್ಧ ನೌಕೆಯೊಂದರಲ್ಲಿ ನಟುನ ದ್ವೀಪವನ್ನು ಸಂದರ್ಶಿಸಿದರು. ದ್ವೀಪಕ್ಕೆ ಸಮೀಪದ ಜಲಪ್ರದೇಶದ ಮೇಲೆ ಚೀನಾ ಹಕ್ಕು ಸ್ಥಾಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಧ್ಯಕ್ಷರು ತನ್ನ ಮುಖ್ಯ ಭದ್ರತಾ ಸಚಿವ ಮತ್ತು ವಿದೇಶ ಸಚಿವರೊಂದಿಗೆ ನೀಡಿದ ಭೇಟಿಯು, ಈ ವಿಷಯದಲ್ಲಿ ಇಂಡೋನೇಶ್ಯ ಚೀನಾಕ್ಕೆ ನೀಡಿದ ಪ್ರಬಲ ಸಂದೇಶವಾಗಿದೆ ಎಂದು ಇಂಡೋನೇಶ್ಯದ ಅಧಿಕಾರಿಗಳು ಹೇಳಿದ್ದಾರೆ.
‘‘ನಮ್ಮ ಇತಿಹಾಸದಲ್ಲಿ ನಾವು ಹಿಂದೆಂದೂ ಇಷ್ಟು ಕಠಿಣವಾಗಿರಲಿಲ್ಲ. ಈ ವಿಷಯವನ್ನು ಅಧ್ಯಕ್ಷರು ಲಘುವಾಗಿ ಪರಿಗಣಿಸಿಲ್ಲವೆಂಬುದನ್ನು ಈ ಘಟನೆ ಸೂಚಿಸುತ್ತದೆ’’ ಎಂದು ಮುಖ್ಯ ಭದ್ರತಾ ಸಚಿವ ಲುಹುತ್ ಪಂಡ್‌ಜೈತನ್ ‘ದ ಜಕಾರ್ತ ಪೋಸ್ಟ್’ ಪತ್ರಿಕೆಗೆ ಹೇಳಿದರು.
ನಟುನ ದ್ವೀಪಗಳ ಮೇಲಿನ ಇಂಡೋನೇಶ್ಯದ ಒಡೆತನವನ್ನು ಚೀನಾ ಪ್ರಶ್ನಿಸುವುದಿಲ್ಲವಾದರೂ, ‘‘ದಕ್ಷಿಣ ಚೀನಾ ಸಮುದ್ರದ ಕೆಲವು ಜಲಪ್ರದೇಶಗಳ ಸಾಗರ ಯಾನ ಹಕ್ಕು ಮತ್ತು ಹಿತಾಸಕ್ತಿಗಳ ವಿಷಯದಲ್ಲಿ ವಿವಾದವಿದೆ’’ ಎಂದು ಚೀನಾ ಸೋಮವಾರ ಹೇಳಿತ್ತು.
ಚೀನಾದ ನಿಲುವನ್ನು ಇಂಡೋನೇಶ್ಯದ ವಿದೇಶ ಸಚಿವ ರೆಟ್ನೊ ಮರ್ಸುಡಿ ಬುಧವಾರ ತಿರಸ್ಕರಿಸಿದರು ಹಾಗೂ ನಟುನ ದ್ವೀಪದ ಸುತ್ತಲಿನ ಜಲಪ್ರದೇಶಗಳು ಇಂಡೋನೇಶ್ಯದ ಭಾಗವಾಗಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಇಂಡೋನೇಶ್ಯ ಮತ್ತು ಚೀನಾದ ನೌಕೆಗಳ ನಡುವೆ ಹಲವು ಬಾರಿ ಮುಖಾಮುಖಿ ಯಾಗಿವೆಯಾದರೂ, ಇವು ಪ್ರಾದೇಶಿಕ ಅಥವಾ ರಾಜತಾಂತ್ರಿಕ ವಿವಾದ ಅಲ್ಲ ಎಂಬುದಾಗಿ ಉಭಯ ದೇಶಗಳೂ ಹೇಳಿಕೊಂಡು ಬಂದಿವೆ. ಈ ದ್ವೀಪ ಸಮೂಹಗಳು ಬೋರ್ನಿಯೊ ದ್ವೀಪದ ಇಂಡೋನೇಶ್ಯದ ಭಾಗವಾಗಿರುವ ಕಲಿಮಂತನ್‌ನಿಂದ 340 ಕಿ.ಮೀ. ದೂರದಲ್ಲಿವೆ.
ಇಂಡೋನೇಶ್ಯದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶವನ್ನೂ ವಿಡೋಡೊ ಭೇಟಿ ಹೊಂದಿದೆ.







