ಇನ್ನೋರ್ವ ಗ್ವಾಂಟನಾಮೊ ಕೈದಿಯ ಬಿಡುಗಡೆ
ಮರುವಸತಿಗಾಗಿ ಮೊಂಟೆನೆಗ್ರೊ ದೇಶಕ್ಕೆ ಕಳುಹಿಸಿದ ಅಮೆರಿಕ
ಮಯಾಮಿ, ಜೂ. 23: ಗ್ವಾಂಟನಾಮೊ ಕೊಲ್ಲಿಯ ಸೆರೆಮನೆಯಲ್ಲಿ ಕಳೆದ 14 ವರ್ಷಗಳಿಂದ ಇದ್ದ ಯಮನ್‌ನ ವ್ಯಕ್ತಿಯೊಬ್ಬನನ್ನು ಬಿಡುಗಡೆಗೊಳಿಸಿ ಮೊಂಟೆನೆಗ್ರೊ ದೇಶಕ್ಕೆ ಕಳುಹಿಸಲಾಗಿದೆ ಎಂದು ಪೆಂಟಗನ್ ಬುಧವಾರ ತಿಳಿಸಿದೆ. ಈ ಮೂಲಕ ಕ್ಯೂಬದ ಅಮೆರಿಕ ನೆಲೆಯಲ್ಲಿರುವ ಜೈಲಿನಿಂದ ಕೈದಿಗಳನ್ನು ಬಿಡುಗಡೆ ಮಾಡುವ ಹೊಸ ಸುತ್ತು ಆರಂಭಗೊಂಡಿದೆ ಎಂದು ಭಾವಿಸಲಾಗಿದೆ.
ತೀವ್ರ ಭದ್ರತಾ ಪರಿಶೀಲನೆ ನಡೆಸಿದ ಬಳಿಕ, ಅಬ್ದುಲ್ ಮಲಿಕ್ ಅಬ್ದುಲ್ ವಹಾಬ್ ಅಲ್ ರಹಾಬಿಯನ್ನು 2014 ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಅಮೆರಿಕದ ಅಧಿಕಾರಿಗಳು ನಿರ್ಧರಿಸಿದ್ದರು.
ಆದರೆ, ಯಮನ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ವಾಂಟನಾಮೊ ಕೈದಿಗಳನ್ನು ಅಲ್ಲಿಗೆ ಕಳುಹಿಸಲು ಬಯಸಲಿಲ್ಲ. ಕೈದಿಗೆ ಪುನರ್ವಸತಿ ಕಲ್ಪಿಸಲು ಆತನನ್ನು ಸ್ವೀಕರಿಸುವ ಹೊಸ ದೇಶವೊಂದನ್ನು ಅಮೆರಿಕ ಹುಡುಕಬೇಕಾಯಿತು.
ಈ ವರ್ಷ ಮೊಂಟೆನೆಗ್ರೊದಲ್ಲಿ ನೆಲೆ ಕಂಡುಕೊಂಡ ಎರಡನೆ ಕೈದಿ ಈತನಾಗಿದ್ದಾನೆ. ಕ್ಯೂಬದಲ್ಲಿರುವ ಬಂಧನ ಕೇಂದ್ರವನ್ನು ಮುಚ್ಚುವುದನ್ನು ತಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಕನಿಷ್ಠ ಅಲ್ಲಿನ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಒಬಾಮ ಆಡಳಿತ ಹೊಂದಿದೆ.
ಗ್ವಾಂಟನಾಮೊ ಕಾರಾಗೃಹವನ್ನು ಮುಚ್ಚುವುದು ಅಧ್ಯಕ್ಷ ಬರಾಕ್ ಒಬಾಮರ ಚುನಾವಣಾ ಭರವಸೆಯಾಗಿತ್ತು.
ಮಾಜಿ ಕೈದಿಯನ್ನು ಸ್ವೀಕರಿಸಿರುವುದಕ್ಕಾಗಿ ಅಮೆರಿಕ ಸರಕಾರ ಮೊಂಟೆನೆಗ್ರೊಗೆ ಆಭಾರಿಯಾಗಿದೆ ಎಂದು ವಿದೇಶಾಂಗ ಇಲಾಖೆಯಲ್ಲಿ ಗ್ವಾಂಟನಾಮೊ ಮುಚ್ಚುಗಡೆಯ ವಿಶೇಷ ರಾಯಭಾರಿ ಲೀ ವೊಲೊಸ್ಕಿ ಹೇಳಿದರು.







