ಪಡೀಲ್‌ನ ರೈಲ್ವೆ ‘ಕೆರೆ’ಯಲ್ಲಿ ಮೀನು ಹಿಡಿದ ಸಾರ್ವಜನಿಕರು!
ರೈಲ್ವೆ ಕೆಳಸೇತುವೆ ಅವ್ಯವಸ್ಥೆ ವಿರುದ್ಧ ವಿನೂತನ ಪ್ರತಿಭಟನೆ

ಮಂಗಳೂರು, ಜೂ.24: ನಗರದ ಪಡೀಲ್ ಮತ್ತು ಬಜಾಲ್ ನಡುವಿನ ರಸ್ತೆಯಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಇಂದು ಡಿವೈಎಫ್‌ಐ ನೇತೃತ್ವದಲ್ಲಿ ವಿನೂತನವಾಗಿ ಮೀನು ಹಿಡಿಯುವ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು ಸೇತುವೆ ನಿರ್ಮಾಣದ ಅತ್ಯಾಧುನಿಕ ವ್ಯವಸ್ಥೆಗಳಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಸಮನ್ವಯದ ಕೊರತೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೆ ಯೋಜನೆಯನ್ನು ರೂಪಿಸದೆ ಕೆಳಸೇತುವೆ ನಿರ್ಮಾಣ ಮಾಡಿರುವ ಇಂಜಿನಿಯರ್ ಧರ್ಮರಾಜ್ ಅವರ ವಿರುದ್ದ ತನಿಖೆ ನಡೆಸಬೇಕು. ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದರೆ ಮನಪಾ ಕಚೇರಿಗೆ ಮುತ್ತಿಗೆಯನ್ನು ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ನಿರಂತರ ಹೋರಾಟಗಳ ಮೂಲಕ ಕೆಳಸೇತುವೆ ನಿರ್ಮಾಣವಾಗಿದ್ದು ಕೆಳಸೇತುವೆ ನಿರ್ಮಾಣ ಮಾಡಿದ ನಂತರ ಫೈಸಲ್‌ನಗರ, ವೀರನಗರ, ವಿಜಯನಗರದ ನಾಗರಿಕರಿಗೆ ಸಮಸ್ಯೆಯಾಗಿದೆ. ಈ ಭಾಗದ ಜನರು ಪಡೀಲ್ ಮುಖ್ಯ ರಸ್ತೆಯವರೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೂಡಲೆ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಪಕ್ಕಲಡ್ಕ ಯುವಕ ಮಂಡಲದ ಮುಖಂಡ ಅಶೋಕ್ ಸಾಲ್ಯಾನ್, ಡಿವೈಎಫ್‌ಐ ಮುಖಂಡ ಸಾದಿಕ್ ಕಣ್ಣೂರು, ಸುರೇಶ್ ಬಜಾಲ್ ವಹಿಸಿದ್ದರು.







