ಎಟಿಎಂ ಕಾರ್ಡ್‌ನ ಸಂಖ್ಯೆ ಪಡೆದು ಲಕ್ಷ ರೂ. ದೋಚಿದ ಖದೀಮರು
ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿ ವಂಚನೆ

ಬ್ರಹ್ಮಾವರ, ಜೂ.24: ಎಟಿಎಂ ನಂಬರ್ ಪಡೆದು ಎರಡೆರಡು ಬ್ಯಾಂಕ್ ಖಾತೆಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಚಾಂತಾರು ಗ್ರಾಮದ ಹರೀಶ್ ಹೆಬ್ಬಾರ್(32) ಎಂಬವರಿಗೆ ಜೂ.21ರಂದು ಬ್ಯಾಂಕಿನ ಮುಖ್ಯ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವ್ಯಕ್ತಿಯೊಬ್ಬರು ಅವರ ಎಟಿಎಂ ನಂಬರನ್ನು ಪಡೆದುಕೊಂಡಿದ್ದರು. ಹರೀಶ್ ಜೂ.22ರಂದು ಎಟಿಎಂನಲ್ಲಿ ಹಣ ತೆಗೆಯಲು ಹೋದಾಗ ಖಾತೆಯಲ್ಲಿದ್ದ 1,14,017ರೂ. ಹಣದಲ್ಲಿ ಕೇವಲ 13,325ರೂ. ಮಾತ್ರ ಇರುವುದು ತಿಳಿಯಿತು.
ಈ ಬಗ್ಗೆ ಅದೇ ನಂಬರಿಗೆ ಕರೆ ಮಾಡಿದಾಗ ನಿಮ್ಮ ಇನ್ನೊಂದು ಬ್ಯಾಂಕ್ ಖಾತೆ ನಂಬ್ರ ನೀಡುವಂತೆ ತಿಳಿಸಿದ್ದರು. ಅದರಂತೆ ಹರೀಶ್ ತನ್ನ ಸಿಂಡಿಕೇಟ್ ಬ್ಯಾಂಕಿನ ಖಾತೆ ನೀಡಿದ್ದರು. ಸ್ವಲ್ಪಹೊತ್ತಿನಲ್ಲಿ ಆ ಖಾತೆಯನ್ನು ಪರಿಶೀಲಿಸಿ ದಾಗ ಅದರಲ್ಲಿದ್ದ 6659.83ರೂ.ನಲ್ಲಿ 66.83ರೂ. ಮಾತ್ರ ಬಾಕಿ ಕಂಡು ಬಂತು.
ದುಷ್ಕರ್ಮಿಗಳು ಎಟಿಎಂ ನಂಬರ್ ಪಡೆದು ಆನ್‌ಲೈನ್ ಮೂಲಕ ಖಾತೆಯಿಂದ ಹಣ ತೆಗೆದು ಹರೀಶ್ ಹೆಬ್ಬಾರ್‌ಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







