ಯುನಿವೆಫ್‌ನಿಂದ ಇಫ್ತಾರ್ ಸ್ನೇಹ ಮಿಲನ

ಮಂಗಳೂರು, ಜೂ.23: ಯುನಿವೆಫ್ ಕರ್ನಾಟಕ ವತಿಯಿಂದ ನಗರದ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇಂದು ಸಂಜೆ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಯುನಿವೆಫ್‌ನ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮೀಯರು ರಮಝಾನ್ ಕುರಿತ ಅಭಿಪ್ರಾಯ ಮಂಡಿಸಿದರು.
ದ.ಕ. ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಪಿ.ಯು. ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ರೊಸಾರಿಯೊ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅಲೋಶಿಯಸ್ ಡಿಸೋಜ ಮಾತನಾಡಿ, ಕ್ರೈಸ್ತ ಧರ್ಮದ ಸಹಿತ ಇತರ ಧರ್ಮೀಯರ ಉಪವಾಸದ ಕ್ರಮವನ್ನು ಹೋಲಿಸಿದರೆ ಮುಸ್ಲಿಮರ ಉಪವಾಸ ಕ್ರಮವು ವಿಶೇಷವಾಗಿದೆ. ಸೂರ್ಯೋದಯಕ್ಕಿಂತ ಮುಂಚಿನಿಂದ ಸೂರ್ಯಾಸ್ತದವರೆಗೆ ಅನ್ನ, ಪಾನೀಯಗಳನ್ನು ತ್ಯಜಿಸಿ ಮುಸ್ಲಿಮರು ಆಚರಿಸುವ ಉಪವಾಸ ಹಾಗೂ ಅದರೊಂದಿಗೆ ಪಾಲಿಸುವ ಶಿಸ್ತು ಹಾಗೂ ಧರ್ಮನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಜೀವನದಲ್ಲಿ ನಾನು ಧರ್ಮಕ್ಕಿಂತ ಹೆಚ್ಚು ಮಾನವೀಯತೆಗೆ ಒತ್ತು ನೀಡಿದವನು. ಆದ್ದರಿಂದ ಮಾನವೀಯತೆಯಿಂದ ಸಾಮಾಜಿಕ ಹಾಗೂ ಮಾನಸಿಕ ನೆಮ್ಮದಿ ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಲ್ಕಿಯ ಸೈಂಟ್ ಆ್ಯನ್ಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಎರಿಕ್ ಸಿ.ಲೋಬೊ ಮಾತನಾಡಿ, ಸಮಾಜದಲ್ಲಿ ದ್ವೇಷದ ಭಾವನೆಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ವಿವಿಧ ಧರ್ಮೀಯರನ್ನೊಳಗೊಂಡ ಕಾರ್ಯಕ್ರಮಗಳು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ. ಆಯಾ ಧರ್ಮದ ಕಾರ್ಯಕ್ರಮವು ಆಯಾ ಧರ್ಮಕ್ಕೆ ಸೀಮಿತಗೊಳಿಸದೆ, ಇತರ ಧರ್ಮೀಯರನ್ನೂ ಆಹ್ವಾನ ನೀಡುವ ಮೂಲಕ ಇತರ ಧರ್ಮದ ಬಗೆಗಿನ ತಿಳುವಳಿಕೆ ನೀಡಬೇಕು ಎಂದರು.
ವೈದ್ಯರಾದ ರವೀಶ್ ತುಂಗ ಮಾತನಾಡಿ, ರಮಝಾನ್ ತಿಂಗಳ ವಿಶೇಷವೆಂದರೆ ಈ ತಿಂಗಳು ಇತರ ಧರ್ಮಗಳಂತೆ ವರ್ಷದಲ್ಲಿ ನಿರ್ದಿಷ್ಟ ತಿಂಗಳು ಅಥವಾ ಋತುವಿನಲ್ಲಿ ಬರುವುದಿಲ್ಲ. ರಮಝಾನ್ ಬೇರೆ ಬೇರೆ ತಿಂಗಳುಗಳಲ್ಲಿ ಬರುತ್ತದೆ. ಈ ಬಾರಿ ಮಳೆಗಾಲದಲ್ಲಿ ಬಂದರೆ, ಕೆಲವು ವರ್ಷಗಳ ಹಿಂದೆ ತೀವ್ರ ಬೇಸಿಗೆಯ ಕಾಲದಲ್ಲೂ ಆಗಮನವಾಗಿತ್ತು. ರಮಝಾನ್ ತಿಂಗಳ ಉಪವಾಸದ ಬಗ್ಗೆ ನಾನು ನನ್ನ ಆಪ್ತರಲ್ಲಿ ಹಾಗೂ ಸ್ನೇಹಿತರಲ್ಲಿ ಚರ್ಚಿಸಿ ಅದರಲ್ಲಿನ ಒಳ್ಳೆಯ ವಿಷಯಗಳನ್ನು ಸಂಗ್ರಹಿಸಿದ್ದೂ ಇದೆ ಎಂದರು.
ನೂತನ ಸಂಘಟನೆ ಅಸ್ತಿತ್ವಕ್ಕೆ
ಹಿಂದೂ, ಕ್ರೈಸ್ತರು ಹಾಗೂ ಮುಸ್ಲಿಮರನ್ನು ಒಳಗೊಂಡ ನೂತನ ಸಂಘಟನೆಯನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಯುನಿವೆಫ್‌ನ ಯೋಜನೆ ಇದೆ ಎಂದು ರಫೀವುದ್ದೀನ್ ಕುದ್ರೋಳಿ ಇದೇ ಸಂದರ್ಭದಲ್ಲಿ ಹೇಳಿದರು. ಮಾನವೀಯತೆಯ ವಿರುದ್ಧದ ವಾದಕ್ಕೆ ಉತ್ತರ ನೀಡುವಂತಾಗಲು ವಿವಿಧ ಧರ್ಮೀಯರನ್ನೊಳಗೊಂಡ ಈ ಸಂಘಟನೆಯನ್ನು ಪ್ರಬಲವಾಗಿ ಸ್ಥಾಪಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಮೆರಿಡಿಯನ್ ಕಾಲೇಜಿನ ಪ್ರಾಂಶುಪಾಲ ಜೋಬಿ ಇ.ಸಿ., ನಗರದ ಬದ್ರಿಯಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ಇಕ್ಬಾಲ್, ಮಂಗಳೂರಿನ ಕೆರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರ್‌ನ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿದರು.
ಯುನಿವೆಫ್‌ನ ದ.ಕ. ಜಿಲ್ಲಾಧ್ಯಕ್ಷ ಸೈಫುದ್ದೀನ್ ಕುದ್ರೋಳಿ ಸ್ವಾಗತಿಸಿದರು. ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು.







