ದೇವರಾಜು ಅರಸು ಆಡಳಿತ ವ್ಯವಸ್ಥೆಯನ್ನು ತಳವರ್ಗದ ಜನರಿಗೆ ತಲುಪಿಸಿದ ಕ್ರಾಂತಿಕಾರಿ ನಾಯಕ: ಎ.ಬಿ.ಇಬ್ರಾಹೀಂ

ಮಂಗಳೂರು,ಜೂ.24: ಸ್ವಾತಂತ್ರ ನಂತರದ ಕರ್ನಾಟಕದ ಇತಿಹಾಸದಲ್ಲಿ ರಾಜ್ಯದ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ತಳ ವರ್ಗದ ಜನರಿಗೆ ಸರಕಾರದ ಆಡಳಿತ ವ್ಯವಸ್ಥೆ ತಲುಪುವಂತೆ ಮಾಡಲು ಶ್ರಮಿಸಿದ ಕ್ರಾಂತಿಕಾರಿ ನಾಯಕರಾಗಿದ್ದರು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.
ಅವರು ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ನಗರದ ಪುರಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡ ನಾಟಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಅರಸುರವರು ಮುಖ್ಯಮಂತ್ರಿಯಾದ ಬಳಿಕ ತಲೆಯಲ್ಲಿ ಮಲ ಹೋರುವ ಪದ್ಧತಿ, ಜೀತ ಪದ್ಧತಿಯನ್ನು ನಿರ್ಮೂಲನ ಮಾಡಲು ಶ್ರಮಿಸಿದರು. ಗೇಣಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದ ಕೃಷಿಕರು ತಮ್ಮ ಭೂಮಿಗೆ ತಾವೆ ಒಡೆಯರಾಗಲು ಅರಸು ಅವರ ದಿಟ್ಟ ನಿರ್ಧಾರ ಕಾರಣವಾಯಿತು. ಆಧುನಿಕ ಕರ್ನಾಟಕದ ಚರಿತ್ರೆ ಎಂದರೆ ಅದು ಅರಸು ಅವರ ಆಡಳಿತದ ಚರಿತ್ರೆಯೆನ್ನಬಹುದು ಎಂದು ಇಬ್ರಾಹೀಂ ತಿಳಿಸಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನು ಏರುವ, ಅಧಿಕಾರ ಹಿಡಿಯುವ ಕನಸು ಕಂಡ ದೇವರಾಜ ಅರಸು ಅವರ ಚಿಂತನೆಯ ಫಲವಾಗಿ ಹಿಂದುಳಿದ ವರ್ಗದವರು ಮೀಸಲಾತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವಾಯಿತು ಎಂದು ಇಬ್ರಾಹೀಂ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಅರಸು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಚಿಂತಿಸಿದ ಮುತ್ಸದ್ಧಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ, ದೇವರಾಜ ಅರಸು ದಲಿತ, ಹಿಂದುಳಿದ ಶೋಷಿತ ವರ್ಗಗಗಳ ಏಳಿಗೆಗೆ ದುಡಿದ ವ್ಯಕ್ತಿಯಾಗಿದ್ದರು. ತಳವರ್ಗದ ಜನರಲ್ಲಿ ಧೈರ್ಯ ತುಂಬಿದ ನಾಯಕರಾಗಿದ್ದರು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ,ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಶಾಹುಲ್ ಹಮೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ಕಲಾವಿದರಿಂದ ದೇವರಾಜು ಅರಸು ಜೀವನ ಚರಿತ್ರೆಯನ್ನೊಳಗೊಂಡ ರಂಗ ನಾಟಕ ಪ್ರದರ್ಶನಗೊಂಡಿತು.







