ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಬೆಂಗಳೂರಿಗೆ ವರ್ಗಾವಣೆ
ಪೌರಾಡಳಿತ ನಿರ್ದೇಶಕರ ಹುದ್ದೆಗೆ ಭಡ್ತಿ

ಉಡುಪಿ, ಜೂ.24: ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ಭಡ್ತಿಯೊಂದಿಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ಇಂದು ಸಂಜೆ ಬೆಂಗಳೂರಿನಲ್ಲಿ ಡಾ.ವಿಶಾಲ್ ಅವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಅವರನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ. ಡಾ.ವಿಶಾಲ್ ತೆರವುಗೊಳಿಸುವ ಜಿಲ್ಲಾಧಿಕಾರಿ ಸ್ಥಾನ ವನ್ನು ಮುಂದಿನ ಆದೇಶದವರೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಭಾರ ಹುದ್ದೆಯಾಗಿ ನಿರ್ವಹಿಸಲಿದ್ದಾರೆ.
ತಮ್ಮ ವರ್ಗಾವಣೆಯ ಕುರಿತಂತೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಡಾ.ವಿಶಾಲ್, ತಮಗಿದು ಖುಷಿ ತಂದಿದೆ ಎಂದರು. ತಾನು ಹಿರಿಯ ಅಧಿಕಾರಿಯಾಗಿರುವುದರಿಂದ ಕೆಲ ಸಮಯದಿಂದ ಇದನ್ನು ನಿರೀಕ್ಷಿಸಿದ್ದೆ. ಇದೀಗ ಪೌರಾಡಳಿತ ನಿರ್ದೇಶಕನಾಗಿ ನೇಮಕಗೊಂಡಿರುವುದರಿಂದ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಇಲಾಖೆಯ ಆಡಳಿತದಡಿ ಬರುತ್ತದೆ. ಹೀಗಾಗಿ ಉಡುಪಿಯೊಂದಿಗಿನ ನನ್ನ ಸಂಬಂಧ ಮುಂದುವರಿಯಲಿದೆ ಎಂದರು.
ಉಡುಪಿಯ ಜಿಲ್ಲಾಧಿಕಾರಿಯಾಗಿ 20 ತಿಂಗಳ ತನ್ನ ಸೇವಾನುಭವ ‘ಫೆಂಟಾಸ್ಟಿಕ್’ ಆಗಿತ್ತು ಎಂದ ಅವರು, ಜಿಲ್ಲೆಯ ಎಲ್ಲರಿಂದಲೂ ನನಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಸರಕಾರಿ ಸೇವೆಯಲ್ಲಿ ನಾವು ‘ಒತ್ತಡ’ಗಳ ಮಧ್ಯೆಯೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದನ್ನು ಸವಾಲಾಗಿ ಸ್ವೀಕರಿಸಿ ನಾವು ಕೆಲಸ ಮಾಡಬೇಕು. ಆದರೆ ಇಲ್ಲಿ ನನಗೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು.







