ಎನ್‌ಎಸ್‌ಜಿಗೆ ಸೇರ್ಪಡೆಗೆ ಒಂದು ದೇಶದಿಂದ ನಿರಂತರ ಅಡ್ಡಗಾಲು: ಚೀನದ ವಿರುದ್ಧ ಭಾರತ ಕಿಡಿ

ತಾಷ್ಕೆಂಟ್,ಜೂ.24: ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಪ್ರಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಭಾರತ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ, 48 ರಾಷ್ಟ್ರಗಳ ಈ ಗುಂಪಿಗೆ ಸೇರ್ಪಡೆಗೊಳ್ಳಲು ಬಯಸಿ ತಾನು ಸಲ್ಲಿಸಿರುವ ಅರ್ಜಿಯ ಕುರಿತ ಚರ್ಚೆಗೆ ಒಂದು ದೇಶವು ನಿಯಮಗಳ ಹೆಸರಿನಲ್ಲಿ ನಿರಂತರವಾಗಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆಯಂದು ಅದು ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ಭಾರತವು ಸೇರ್ಪಡೆಯಾದಲ್ಲಿ ಎನ್‌ಎಸ್‌ಜಿಗೆ ಪರಮಾಣು ಪ್ರಸರಣ ತಡೆ ವಿರೋಧಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಿತ್ತು ಎಂದು ತಿಳಿಸಿದರು.
ದ.ಕೊರಿಯದ ರಾಜಧಾನಿ ಸೋಲ್‌ನಲ್ಲಿ ನಡೆದ ತನ್ನ ಎರಡು ದಿನಗಳ ಅಧಿವೇಶನದ ಕೊನೆಯಲ್ಲಿ ಎನ್‌ಎಸ್‌ಜಿಯು ಅಣುಪ್ರಸರಣ ತಡೆ ಒಪ್ಪಂದದ ಜಾರಿಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿತು ಹಾಗೂ ಈ ಒಪ್ಪಂದಕ್ಕೆ ಸಹಿಹಾಕದ ಭಾರತವನ್ನು ತನ್ನ ಗುಂಪಿಗೆ ಸೇರ್ಪಡೆಗೊಳಿಸಲು ಯಾವುದೇ ರಿಯಾಯಿತಿಯನ್ನು ನೀಡದಿರಲು ನಿರ್ಧರಿಸಿತು.





