ರಾಜ್ಯದಲ್ಲಿ ಎಲ್ಲ ವಿವಿಗಳಿಗೂ ಏಕರೂಪ ಕಾಯ್ದೆ ಜಾರಿ

ಬೆಂಗಳೂರು, ಜೂ.24: ರಾಜ್ಯದಲ್ಲಿ ವಿವಿಧ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 23 ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಏಕರೂಪ ಕಾಯ್ದೆಯಡಿ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ನಗರದ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಪರಸ್ಪರ ಕೊಡುಕೊಳ್ಳುವಿಕೆಯ ದೃಷ್ಟಿಯಿಂದ ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಒಂದು ಕಾಯ್ದೆಯಡಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ವಿವಿಗಳ ಹಣ ಖಜಾನೆಗೆ ಬರಲಿ: ವಿಶ್ವವಿದ್ಯಾನಿಲಯಗಳ ಕುಲಪತಿಗಳು ತಮ್ಮ ವಿವಿಗೆ ಸಂಬಂಧಿಸಿದ ಹಣವನ್ನು ಬ್ಯಾಂಕ್‌ನಲ್ಲಿಡುತ್ತಿದ್ದಾರೆ. ಇದರಿಂದ ಹಲವು ಸಮಸ್ಯೆಗಳು ಸಂಭವಿಸುತ್ತಿವೆ. ಉದಾಹರಣೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸುಮಾರು 412 ಕೋಟಿ ರೂ.ವನ್ನು ಶುಲ್ಕ ರೂಪದಲ್ಲಿ ಸಂಗ್ರಹಿಸಿ, ಬ್ಯಾಂಕ್‌ನಲ್ಲಿ ಇಡಲಾಗಿತ್ತು. ಆದರೆ, ಈ ಹಣವನ್ನು ಕೇಂದ್ರದ ಹಣಕಾಸು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಣವನ್ನು ವಾಪಸ್ ಪಡೆಯಲು ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ವಿವಿಗಳು ತಮ್ಮ ಹಣವನ್ನು ಸರಕಾರದ ಖಜಾನೆಯಲ್ಲಿ ಇಡುವುದು ಕ್ಷೇಮವೆಂದು ಅವರು ಸೂಚಿಸಿದರು.
ಯೋಗ ಕಡ್ಡಾಯ: ವಿದ್ಯಾರ್ಥಿ ಹಾಗೂ ಕಾಲೇಜುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಯೋಗ ಪರಿಣಾಮಕಾರಿಯಾಗಿದೆ. ಹೀಗಾಗಿ ಇನ್ನು ಮುಂದೆ ರಾಜ್ಯದ ಪ್ರತಿ ಕಾಲೇಜಿನಲ್ಲಿ ಯೋಗವನ್ನು ಕಡ್ಡಾಯ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕರ ನೇಮಕಕ್ಕೆ ಚಿಂತನೆ ನಡೆಸಲಾಗುವುದು ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.
ಯುಜಿಸಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕೆಲವು ನ್ಯೂನತೆಯನ್ನು ಮುಂದಿಟ್ಟು ಮಾನ್ಯತೆಯನ್ನು ರದ್ದುಮಾಡಿದೆ. ಈ ಸಂಬಂಧ ಮುಕ್ತ ವಿವಿಯ ಕುಲಪತಿಗಳೊಂದಿಗೆ ಚಿರ್ಚಿಸಿ ನ್ಯೂನತೆಯನ್ನು ಸರಿಪಡಿಸಿ, ಪುನಃ ಮಾನ್ಯತೆಯನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸುಮಾರು 80ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕುಡಿಯುವ ನೀರಿನ ಕೊರತೆಯಿದ್ದು, ತ್ವರಿತವಾಗಿ ಕೊಳವೆ ಬಾವಿ ಕೊರೆಯಲು ಆದೇಶಿಸಿದ್ದೇನೆ. ವಿದ್ಯಾರ್ಥಿಗಳಿಗೆ ಶುದ್ಧ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸರಕಾರದ ಅತಿ ಮುಖ್ಯ ಕರ್ತವ್ಯವೆಂದು ಅವರು ಅಭಿಪ್ರಾಯಿಸಿದರು.
ರಾಜ್ಯದಲ್ಲಿ ವಿವಿಗಳಲ್ಲಿರುವ ಶೈಕ್ಷಣಿಕ ಸಮಸ್ಯೆ ಹಾಗೂ ಸವಾಲುಗಳನ್ನು ಅರಿಯುವ ಉದ್ದೇಶದಿಂದ ಜುಲೈ ತಿಂಗಳ ಎರಡನೆ ವಾರದಲ್ಲಿ 23 ವಿವಿಗಳ ಶೃಂಗ ಸಭೆಯನ್ನು ಕರೆಯಲಾಗಿದೆ. ಈ ವೇಳೆ ಪ್ರತಿ ವಿವಿಯ ಕುಲಪತಿ ತಮ್ಮ ವಿಶ್ವವಿದ್ಯಾನಿಲಯದಲ್ಲಿರುವ ಶೈಕ್ಷಣಿಕ ಗುಣಮಟ್ಟ ಹಾಗೂ ಸಮಸ್ಯೆ, ಸವಾಲುಗಳ ಕುರಿತು ಸುದೀರ್ಘವಾಗಿ ಮಾತನಾಡಲಿದ್ದಾರೆ.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ







