ಬಳ್ಳಾರಿ ಜಿಲ್ಲಾ ಎಸ್ಪಿ ಚೇತನ್‌ಗೆ ಮಹಿಳಾ ಆಯೋಗದ ನೋಟಿಸ್
ಅನುಪಮಾ ಶೆಣೈ ನೀಡಿರುವ ದೂರಿನ ಹಿನ್ನೆಲೆ

ಬೆಂಗಳೂರು, ಜೂ. 24: ಕೂಡ್ಲಿಗಿ ತಾಲೂಕಿನ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಜೂ.30ರಂದು ಆಯೋಗಕ್ಕೆ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಮಹಿಳಾ ಆಯೋಗ ಬಳ್ಳಾರಿ ಜಿಲ್ಲಾ ಎಸ್ಪಿ ಆರ್.ಚೇತನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಕರ್ತವ್ಯದ ವೇಳೆ ನನಗೆ ಬಳ್ಳಾರಿ ಜಿಲ್ಲಾ ಎಸ್ಪಿ ಆರ್.ಚೇತನ್ ಕಿರುಕುಳ ನೀಡುತ್ತಿದ್ದರು. ನನ್ನ ಅಧೀನ ಅಧಿಕಾರಿಗಳು ಕೆಲಸದಲ್ಲಿ ಸಹಕಾರ ನೀಡುತ್ತಿರಲಿಲ್ಲ. ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಲು ಚೇತನ್ ಅವರೇ ಕಾರಣ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ದೂರು ನೀಡಿದ್ದರು.
ನಾನು ನೀಡಿರುವ ದೂರನ್ನು ಯಾವುದೇ ಕಾರಣಕ್ಕೂ ವಿಚಾರಣೆ ನಡೆಸಲು ಪೊಲೀಸರಿಗೆ ಅವಕಾಶ ನೀಡಬಾರದು. ಮಹಿಳಾ ಆಯೋಗವೇ ಖುದ್ದು ವಿಚಾರಣೆ ನಡೆಸಬೇಕು ಎಂದು ಅನುಪಮಾ ಶೆಣೈ ಮನವಿ ಮಾಡಿದ್ದರು.
ನಾನು ಜೂ.4ರಂದು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ಕೆಲವರನ್ನು ಚೇತನ್ ಎತ್ತಿಕಟ್ಟಿದ್ದರು. ನನ್ನ ಪ್ರತಿಯೊಂದು ಕೆಲಸದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆಯಾಗಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಚೇತನ್‌ಗೆ ಮಹಿಳಾ ಆಯೋಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.







