ಒಲಿಂಪಿಕ್ಸ್‌ಗೆ ಅರ್ಜೆಂಟೀನ ತಂಡ ಪ್ರಕಟ

ಬ್ಯೂನಸ್ ಐರಿಸ್, ಜೂ.24: ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಜೆಂಟೀನದ ಕೋಚ್ ಗೆರಾರ್ಡೊ ಮಾರ್ಟಿನೊ ಗುರುವಾರ ತಂಡ ಪ್ರಕಟಿಸಿದ್ದಾರೆ. ಆದರೆ, ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮೆಸ್ಸಿ ಒಲಿಂಪಿಕ್ಸ್ ಬದಲಿಗೆ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡುವುದಾಗಿ ಈ ಮೊದಲೇ ಹೇಳಿದ್ದರು.
ರವಿವಾರ ನಡೆಯಲಿರುವ ಕೋಪಾ ಅಮೆರಿಕ ಫೈನಲ್‌ನ ಬಳಿಕ ಅರ್ಜೆಂಟೀನದ 22 ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅರ್ಜೆಂಟೀನ ಕೋಪಾ ಅಮೆರಿಕ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಚಿಲಿ ತಂಡವನ್ನು ಎದುರಿಸಲಿದೆ.
ಮೆಸ್ಸಿ ನಿರೀಕ್ಷೆಯಂತೆಯೇ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದಾರೆ. ಮೆಸ್ಸಿ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮೆಸ್ಸಿ ಅವರು ಕೋಪಾ ಅಮೆರಿಕ ಟೂರ್ನಿ ಹಾಗೂ ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಎರಡರಲ್ಲೂ ಭಾಗವಹಿಸುವುದಿಲ್ಲ ಎಂದು ಗೆರಾರ್ಡ್‌ಗೆ ಮಾಹಿತಿಯಿತ್ತು.
ಗುರುವಾರ ಪ್ರಕಟಿಸಲಾದ ಅರ್ಜೆಂಟೀನ ತಂಡದಲ್ಲಿ 9 ಆಟಗಾರರು ಆಯ್ಕೆಯಾಗಿದ್ದಾರೆ. 2004 ಹಾಗೂ 2008ರಲ್ಲಿ ಒಲಿಂಪಿಕ್ ಚಾಂಪಿಯನ್ಸ್ ಆಗಿರುವ ಅರ್ಜೆಂಟೀನ ಈ ವರ್ಷ ರಿಯೋದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿದೆ. ಅರ್ಜೆಂಟೀನ ‘ಡಿ’ ಗುಂಪಿನಲ್ಲಿ ಪೋರ್ಚುಗಲ್, ಅಲ್ಜೇರಿಯ ಹಾಗೂ ಹೊಂಡುರಾಸ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.







