ಕೊಹ್ಲಿಗೆ ಉತ್ತಮ ಮಾರ್ಗದರ್ಶಕ ಲಭಿಸಿದ್ದಾರೆ: ಹರ್ಭಜನ್

ಹೊಸದಿಲ್ಲಿ, ಜೂ.24: ‘‘ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಉತ್ತಮ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕ’ನೊಬ್ಬನನ್ನು ಕೋಚ್ ಆಗಿ ಪಡೆದಿದ್ದಾರೆ. ಈ ಇಬ್ಬರು(ಕುಂಬ್ಳೆ-ಕೊಹ್ಲಿ) ಭಾರತೀಯ ಕ್ರಿಕೆಟ್ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ’’ ಎಂದು ನೂತನ ಕೋಚ್ ಅನಿಲ್ ಕುಂಬ್ಳೆ ಅವರನ್ನು ಚೆನ್ನಾಗಿಬಲ್ಲ, ಚಾಂಪಿಯನ್ ಆಟಗಾರ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
‘‘ಯಾರಿಗೂ ಅಗೌರವ ತೋರದ ಅನಿಲ್ ಕುಂಬ್ಳೆ ಸದಾಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಆಗಿ ಉಳಿದಿದ್ದ ಕುಂಬ್ಳೆ ಇದೀಗ ಕೋಚ್ ಪಾತ್ರದಲ್ಲೂ ತಂಡಕ್ಕೆ ಗೆಲುವು ತಂದುಕೊಡಲು ತನ್ನ ಹಿಂದಿನ ಶ್ರದ್ಧಾ-ಭಕ್ತಿಯನ್ನು ತೋರಬೇಕಾಗಿದೆ. ವಿರಾಟ್ ಕೊಹ್ಲಿಗೆ ಕುಂಬ್ಳೆಯವರಿಂದ ಸಾಕಷ್ಟು ಕಲಿಯಬಹುದು. ಕುಂಬ್ಳೆ ಅವರು ಕೊಹ್ಲಿಯವರ ಉತ್ತಮ ಸ್ನೇಹಿತ, ಫಿಲಾಸಫರ್ ಹಾಗೂ ಗೈಡ್ ಆಗಲಿದ್ದಾರೆ ಎಂದು ಹರ್ಭಜನ್ ಹೇಳಿದ್ದಾರೆ.
ಕುಂಬ್ಳೆ ಅವರೊಂದಿಗೆ ದಶಕಗಳ ಕಾಲ ಕ್ರಿಕೆಟ್ ಆಡಿರುವ ಹರ್ಭಜನ್, ‘‘ಕುಂಬ್ಳೆ ಅವರದ್ದು ನಂಬಲಸಾಧ್ಯ, ಶಿಸ್ತುಬದ್ಧ ಕಾರ್ಯಶೈಲಿ. ಎದುರಾಳಿ ಬ್ಯಾಟ್ಸ್‌ಮನ್‌ನ ರಣನೀತಿಯನ್ನು ಭೇದಿಸುವ ಸಾಮರ್ಥ್ಯ ಅವರಲ್ಲಿತ್ತು. ಅನಿಲ್‌ಬಾ ಮಾರ್ಗದರ್ಶನದಲ್ಲಿ ನಮ್ಮ ಹುಡುಗರು ಟೆಸ್ಟ್ ಪಂದ್ಯದ ನಾಲ್ಕನೆ ಇಲ್ಲವೇ ಐದನೆ ದಿನದಲ್ಲಿ ಪಂದ್ಯವನ್ನು ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಭಾರತದ ಸ್ಪಿನ್ನರ್‌ಗಳಿಗೆ ಸ್ವದೇಶದಲ್ಲಿ ಟೆಸ್ಟ್ ಗೆಲ್ಲಬೇಕಾದರೆ ಟೇಲರ್-ಮೇಡ್ ಪಿಚ್ ಇರಬೇಕೆಂಬ ತಪ್ಪು-ಗ್ರಹಿಕೆಯನ್ನು ಕುಂಬ್ಳೆ ಹೋಗಲಾಡಿಸಬಲ್ಲರು’’ ಎಂದು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೆ ಗರಿಷ್ಠ ವಿಕೆಟ್ ಪಡೆದಿರುವ ಹರ್ಭಜನ್ ತಿಳಿಸಿದರು.







