ಗುಲ್ಬರ್ಗಾ ನರ್ಸಿಂಗ್ ವಿದ್ಯಾರ್ಥಿನಿಗೆ ಕಿರುಕುಳ ಪ್ರಕರಣ: ಹಿರಿಯ ವಿದ್ಯಾರ್ಥಿನಿಯರ ಬಂಧನ

ಬೆಂಗಳೂರು, ಜೂ.24: ಗುಲ್ಬರ್ಗಾದ ಅಲ್ ಖಮರ್ ನರ್ಸಿಂಗ್ ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರನ್ನು ಕರ್ನಾಟಕ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ವಿದ್ಯಾರ್ಥಿನಿಯರೆಲ್ಲರೂ ಕೇರಳ ಮೂಲದವರಾಗಿದ್ದು, ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದೆ.
ಗುಲ್ಬರ್ಗಾದ ಅಲ್ ಖಮರ್ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ 19 ವರ್ಷದ ಅಶ್ವತಿ ತನ್ನ ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿನಿಯರಿಂದ ರ್ಯಾಗಿಂಗ್‌ಗೆ ಒಳಗಾಗಿದ್ದಳು. ಸತತವಾಗಿ ತನ್ನನ್ನು ರ್ಯಾಗ್ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿನಿಯರು ಮೇ 9ರಂದು ತನಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ್ದರು ಎಂದು ಆರೋಪಿಸಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಕರ್ನಾಟಕ ಪೊಲೀಸರು ತನಿಖೆ ನಡೆಸಿ, ಅದೇ ಕಾಲೇಜಿನ, ಕೇರಳ ಮೂಲದ ವಿದ್ಯಾರ್ಥಿನಿಯರನ್ನು ಬಂಧಿಸಿದ್ದಾರೆ. ವಿಚಾರಣೆಯ ಬಳಿಕ ಸಂಪೂರ್ಣ ಮಾಹಿತಿ ಲಭಿಸಬಹುದು ಎಂದು ತಿಳಿದುಬಂದಿದೆ.
ರ್ಯಾಗಿಂಗ್ ಪರಿಣಾಮವಾಗಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿ ಅಶ್ವತಿ ಈಗ ಕೊಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





