ಎಲ್ಲ ಆರ್‌ಟಿಇ ಸೀಟುಗಳನ್ನು ಭರ್ತಿ ಮಾಡಿ; ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವ ಪ್ರಮೋದ್ ಆದೇಶ

ಉಡುಪಿ, ಜೂ.24: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ 1,167 ಸೀಟುಗಳನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡುಪಿ ಜಿಪಂನ ಎರಡನೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು, ಜಿಲ್ಲೆಯಲ್ಲಿ ಆರ್‌ಟಿಇ ಸೀಟು ಹಂಚಿಕೆಯ ಕುರಿತ ಚರ್ಚೆಯ ವೇಳೆ ಸಂಬಂಧಿತ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ಜಿಪಂ ಸದಸ್ಯರು ಹಾಗೂ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಧ್ಯಪ್ರವೇಶಿಸಿ ಈ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಆರ್‌ಟಿಇ ಕುರಿತು ವಿವರಗಳನ್ನು ನೀಡಿದ ಡಿಡಿಪಿಐ ದಿವಾಕರ ಶೆಟ್ಟಿ, 80 ಖಾಸಗಿ ಶಾಲೆಗಳ ಒಟ್ಟು 1,167 ಸೀಟುಗಳು ಲಭ್ಯವಿದ್ದು, ಸರಕಾರದ ಮಾರ್ಗದರ್ಶಿ ಸೂತ್ರದಂತೆ ಮೊದಲ ಹಂತದಲ್ಲಿ 425 ಮಕ್ಕಳ ದಾಖಲಾತಿಯಾಗಿದೆ. ಉಳಿದವು ತಿರಸ್ಕೃತಗೊಂಡಿವೆ. ಇನ್ನು ಎರಡನೆ ಹಂತದ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ ಎಂದರು.
ಅಧಿಕಾರಿಗಳ ಉತ್ತರದಿಂದ ಸಿಟ್ಟಿಗೆದ್ದ ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಗೋಪಾಲ ಪೂಜಾರಿ, ಸೀಟುಗಳ ಆಯ್ಕೆ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ನೀಡಿದ ಮೇಲೂ ಹಿಂದಿನ ಸುತ್ತೋಲೆಯ ನೆಪವನ್ನು ಹಿಡಿದು ಮಕ್ಕಳು ಹಾಗೂ ಹೆತ್ತವರನ್ನು ಇಲಾಖೆ ಸತಾಯಿಸುತ್ತಿದೆ ಎಂದರು.
ಗ್ರಾಪಂಗೆ ಕಿಂಡಿ ಅಣೆಕಟ್ಟಿನ ನಿರ್ವಹಣೆ:
ಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಜವಾಬ್ದಾರಿಯನ್ನು ಇನ್ನು ಮುಂದೆ ಗ್ರಾಪಂಗೆ ನೀಡುವ ನಿರ್ಣಯವನ್ನು ಸಾಮಾನ್ಯ ಸಭೆ ಕೈಗೊಂಡಿತು. ಕಿಂಡಿ ಅಣೆಕಟ್ಟುಗಳಿಗೆ ಮಳೆಗಾಲ ಮುಗಿದ ಬಳಿಕ ಡಿಸೆಂಬರ್-ಜನವರಿ ತಿಂಗಳಲ್ಲಿ ಹಲಗೆಗಳನ್ನು ಹಾಕಲು ಅಧಿಕಾರಿಗಳು ವಿಫಲವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ ಎಂದು ಸದಸ್ಯರು ದೂರಿದಾಗ ಈ ಕುರಿತು ವಿವರವಾದ ಚರ್ಚೆ ನಡೆಯಿತು. ಕಿಂಡಿ ಅಣೆಕಟ್ಟಿನ ನಿರ್ವಹಣೆಯನ್ನು ಗ್ರಾಮದಲ್ಲಿ ರಚಿಸಲಾಗುವ ನೀರು ಬಳಕೆದಾರರ ಸಮಿತಿಗೆ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದಾಗ, ಇದನ್ನು ಸದಸ್ಯರು ವಿರೋಧಿಸಿದರು. ಇದನ್ನು ಆಯಾ ಗ್ರಾಪಂಗಳಿಗೆ ನೀಡಬೇಕು ಎಂದು ಮಂದಾರ್ತಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಅವರ ಸಲಹೆಯನ್ನು ಸಭೆ ಒಪ್ಪಿಕೊಂಡು ನಿರ್ಣಯ ಕೈಗೊಂಡಿತು.
ಸುರಕ್ಷತಾ ಕ್ರಮಕ್ಕೆ ಆಗ್ರಹ:
ತ್ರಾಸಿ ಬಳಿ ಇತ್ತೀಚೆಗೆ ಸಂಭವಿಸಿದ ಶಾಲಾ ಮಕ್ಕಳ ವಾಹನ ಅಪಘಾತದ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದಾಗ ಇನ್ನು ಮುಂದೆ ಈ ರೀತಿಯ ಘಟನೆಗಳು ಸಂಭವಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗುವ ಕುರಿತು ಮತ್ತು ಮುಂದಿನ ವರ್ಷದಿಂದ ಶಾಲಾ ಆಡಳಿತ ಮಂಡಳಿಗಳೇ ಮಕ್ಕಳಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡುವ ಕುರಿತಂತೆ ಅಗತ್ಯ ನಿಯಮ ರೂಪಿಸಬೇಕು, ವಾಹನಗಳಲ್ಲಿ ಮಿತಿ ಮೀರಿ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ತಡೆಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ಈಗ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ವಿರುದ್ಧ ಪೊಲೀಸರು ಶಿಸ್ತು ಕ್ರಮ ತೆಗೆದುಕೊಳ್ಳುತ್ತಿರುವುದರಿಂದ ರಿಕ್ಷಾ ಹಾಗೂ ವ್ಯಾನ್ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದ ಮಕ್ಕಳು ಶಾಲೆಗೆ ಹೋಗದಂತಾಗಿದೆ. ವಿದ್ಯಾರ್ಥಿ ಗಳು ಹಾಗೂ ಹೆತ್ತವರು ಇದರಿಂದ ತೀವ್ರ ತೊಂದರೆ ಅನುಭವಿಸು ತ್ತಿದ್ದಾರೆ ಎಂದು ಸದಸ್ಯ ಜನಾರ್ದನ ತೋನ್ಸೆ ನುಡಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಶಾಲೆಗೆ ಕಳಪೆ ಬೇಳೆಕಾಳು
ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಕಳಪೆ ಗುಣಮಟ್ಟದ ಅಕ್ಕಿ ಹಾಗೂ ಬೇಳೆಕಾಳು ಪೂರೈಕೆಯಾಗುತ್ತಿರುವ ಕುರಿತು ಹೆಬ್ರಿ ಸದಸ್ಯೆ ಜ್ಯೋತಿ ಹರೀಶ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಅಂಡಾರು ಶಾಲೆಗೆ ನೀಡಲಾದ ಬೇಳೆಕಾಳನ್ನು ತಂದು ಅಧ್ಯಕ್ಷರಿಗೆ ತೋರಿಸಿ ಇದನ್ನು ತಿನ್ನಲು ಅಲ್ಲಿನ ಮಕ್ಕಳು ನಿರಾಕರಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅವರಿಗೆ ಬೆಂಬಲವಾಗಿ ಉಳಿದ ಉಳಿದ ಸದಸ್ಯರು ಹಾಗೂ ಶಾಸಕರು ಮಾತನಾಡಿದರು.
ಇದಕ್ಕೆ ಉತ್ತರಿಸಿದ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಶಾಲೆಗೆ ನೀಡಬೇಕಾದ ಪಡಿತರವನ್ನು ಪಡೆಯು ವಾಗಲೇ ಕಳಪೆ ಗುಣಮಟ್ಟದ ಬೇಳೆಕಾಳುಗಳನ್ನು ತಿರಸ್ಕರಿಸಬಹುದು. ತಪ್ಪಿ ಇಂತಹ ಪಡಿತರ ಶಾಲೆಗೆ ಬಂದಾಗಲೂ ಶಾಲೆಯ ಮುಖ್ಯಸ್ಥರು ಅದನ್ನು ವಾಪಸ್ ಮಾಡಿ ಸ್ಥಳೀಯವಾಗಿ ಖರೀದಿಸಿ ಮಕ್ಕಳಿಗೆ ಬಿಸಿಯೂಟ ನೀಡಲು ಅವಕಾಶವಿದೆ. ಈ ಬಗ್ಗೆ ಎಲ್ಲಿ ತಪ್ಪುಗಳಾಗಿವೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.







