ಸೆಮಿಫೈನಲ್‌ನಲ್ಲಿ ಜೊಕೊವಿಕ್‌ಗೆ ಫೆಡರರ್ ಎದುರಾಳಿ
ವಿಂಬಲ್ಡನ್ ಟೆನಿಸ್ ಟೂರ್ನಿಯ ಡ್ರಾ ಪ್ರಕ್ರಿಯೆ

ಲಂಡನ್, ಜೂ.24: ಸೋಮವಾರದಿಂದ ಆರಂಭವಾಗಲಿರುವ ಈ ವರ್ಷದ ವಿಂಬಲ್ಡನ್ ಟೆನಿಸ್ ಟೂರ್ನಿಯ ಡ್ರಾ ಪ್ರಕ್ರಿಯೆ ಶುಕ್ರವಾರ ಇಲ್ಲಿ ನಡೆದಿದ್ದು, ಟೂರ್ನಿಯ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಏಳು ಬಾರಿಯ ಚಾಂಪಿಯನ್ ರೋಜರ್ ಫೆಡರರ್‌ರನ್ನು ಎದುರಿಸುವ ಸಾಧ್ಯತೆಯಿದೆ.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಕಳೆದ ಎರಡು ಫೈನಲ್‌ನಲ್ಲಿ ಫೆಡರರ್‌ರನ್ನು ಮಣಿಸಿದ್ದ ವಿಶ್ವದ ನಂ.1 ಆಟಗಾರ ಜೊಕೊವಿಕ್ 1969ರ ಬಳಿಕ ವರ್ಷದ ಎಲ್ಲ ಗ್ರಾನ್‌ಸ್ಲಾಮ್ ಟೂರ್ನಿಗಳನ್ನು ಜಯಿಸಿದ ಮೊದಲ ಆಟಗಾರನಾಗುವ ಕನಸು ಕಾಣುತ್ತಿದ್ದಾರೆ.
ಈ ತಿಂಗಳಾರಂಭದಲ್ಲಿ ಫ್ರೆಂಚ್ ಓಪನ್ ಜಯಿಸಿ ವೃತ್ತಿಬದುಕಿನಲ್ಲಿ ಎಲ್ಲ ಗ್ರಾನ್‌ಸ್ಲಾಮ್ ಜಯಿಸಿದ ಸಾಧನೆ ಮಾಡಿದ್ದ ಜೊಕೊವಿಕ್ ಬ್ರಿಟನ್‌ನ ವೈಲ್ಡ್‌ಕಾರ್ಡ್ ಆಟಗಾರ ಜೇಮ್ಸ್ ವಾರ್ಡ್‌ರನ್ನು ಎದುರಿಸುವುದರೊಂದಿಗೆ ಈ ವರ್ಷ ವಿಂಬಲ್ಡನ್ ಅಭಿಯಾನ ಆರಂಭಿಸಲಿದ್ಧಾರೆ. ಅಂತಿಮ-8ರ ಸುತ್ತಿನಲ್ಲಿ ಕೆನಡಾದ ಮಿಲಾಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ. ಫ್ರೆಂಚ್‌ನ ರಿಚರ್ಡ್ ಗ್ಯಾಸ್ಕಟ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಈ ವರ್ಷ ಹೆಚ್ಚಿನ ಅವಧಿಯಲ್ಲಿ ಗಾಯದ ಸಮಸ್ಯೆಯನ್ನು ಎದುರಿಸಿದ್ದ ಫೆಡರರ್ ಅರ್ಜೆಂಟೀನದ ಗ್ಯುಡೊ ಪೆಲ್ಲಾರನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದ್ದಾರೆ. 34ರ ಹರೆಯದ ಸ್ವಿಸ್ ಆಟಗಾರ ಫೆಡರರ್ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಎದುರಿಸಬಹುದು. ಅಂತಿಮ ನಾಲ್ಕರ ಸುತ್ತಿನಲ್ಲಿ ವಾವ್ರಿಂಕ ಅಥವಾ ಆಸ್ಟ್ರೀಯದ ಡೊಮಿನಿಕ್ ಥಿಯೆಮ್ ಮುಖಾಮುಖಿಯಾಗಬಹುದು.
ಡ್ರಾ ಪ್ರಕ್ರಿಯೆ ಪ್ರಕಾರ 2013ರ ಚಾಂಪಿಯನ್ ಆ್ಯಂಡಿ ಮರ್ರೆ ಟೂರ್ನಿಯ ಮತ್ತೊಂದು ಸೆಮಿಫೈನಲ್‌ನಲ್ಲಿ ನಾಲ್ಕನೆ ಶ್ರೇಯಾಂಕದ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯ್ ಸೆರೆನಾ ವಿಲಿಯಮ್ಸ್ ಅಂತಿಮ-ನಾಲ್ಕರ ಸುತ್ತಿನಲ್ಲಿ ಪೊಲೆಂಡ್‌ನ 3ನೆ ಶ್ರೇಯಾಂಕಿತೆ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು ಎದುರಿಸುವ ಸಾಧ್ಯತೆಯಿದೆ. ರಾಂಡ್ವಾಂಸ್ಕಾ 2012ರ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು.
ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸೆರೆನಾರನ್ನು ಮಣಿಸಿ ಚಾಂಪಿಯನ್ ಆಗಿದ್ದ ಸ್ಪೇನ್‌ನ ಗಾರ್ಬೈನ್ ಮುಗುರುಝ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ವಿನ್ನರ್ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸುವರು. ಮುಗುರುಝ ಮೊದಲ ಸುತ್ತಿನಲ್ಲಿ ಇಟಲಿಯ ಕಾಮಿಲಾ ಗಿಯೊರ್ಗಿ ಅವರನ್ನು ಎದುರಿಸಲಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಆರಂಭಿಕ ಪಂದ್ಯದಲ್ಲಿ ರೊಮಾನಿಯದ ಸೊರಾನಾ ಸಿರ್ಸ್ಟಿಯಾರನ್ನು ಎದುರಿಸುವರು.







