ಇನ್ನು ಮುಂದೆ ರಣಜಿ ಟ್ರೋಫಿ ಪಂದ್ಯಗಳು ತಟಸ್ಥ ತಾಣದಲ್ಲಿ
ಬಿಸಿಸಿಐ ಕಾರ್ಯಕಾರಿಣಿ ಸಭೆ ಕ್ರಾಂತಿಕಾರಿ ಹೆಜ್ಜೆ

ಹೊಸದಿಲ್ಲಿ, ಜೂ.24: ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಬಿಸಿಸಿಐನ ಕಾರ್ಯಕಾರಿಣಿ ಸಮಿತಿ ಮುಂಬರುವ ಎಲ್ಲ ರಣಜಿ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ನಡೆಸುವ ಕುರಿತಂತೆ ತಾಂತ್ರಿಕ ಸಮಿತಿ ಇಟ್ಟಿರುವ ಪ್ರಸ್ತಾವನೆಗೆ ಮಾನ್ಯತೆ ನೀಡಿದೆ.
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಶುಕ್ರವಾರ ಧರ್ಮಶಾಲಾದಲ್ಲಿ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ಕಳೆದ ತಿಂಗಳು ಸೌರವ್ ಗಂಗುಲಿ ನೇತೃತ್ವದ ಸಮಿತಿ ಮಾಡಿರುವ ಶಿಫಾಸರನ್ನು ಕೆಲವು ಅಸೋಸಿಯೇಶನ್‌ಗಳು ವಿರೋಧಿಸುವೆ ಎಂದು ವರದಿಯಾಗಿತ್ತು. ಕಳೆದ ಋತುವಿನಲ್ಲಿ ಹೆಚ್ಚಿನ ರಣಜಿ ಪಂದ್ಯಗಳು ಮೂರು ಇಲ್ಲವೇ ಎರಡೇ ದಿನಗಳಲ್ಲಿ ಕೊನೆಗೊಂಡಿದ್ದ ಹಿನ್ನೆಲೆಯಲ್ಲಿ ರಣಜಿ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವ ಕುರಿತಂತೆ ಚಿಂತನೆ ನಡೆಸಲಾಗಿದೆ.
ರಣಜಿ ಪಂದ್ಯಗಳನ್ನು ಬೇಗನೆ ಕೊನೆಗೊಳ್ಳುವುದರಿಂದ ರಣಜಿ ಟ್ರೋಫಿಯ ಗುಣಮಟ್ಟಕ್ಕೆ ಹಾನಿಯಾಗಲಿದೆ. ಇಂತಹ ಪಿಚ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ರೂಪುಗೊಳ್ಳಲಾರರು ಎಂದು ಸಮಿತಿ ಮನಗಂಡಿದೆ.
ರಣಜಿ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಸ್ಥಳಾಂತರಿಸಬೇಕೆಂದು ಕಳೆದ ವರ್ಷ ಹರ್ಭಜನ್ ಸಿಂಗ್ ಮೊದಲ ಬಾರಿ ಸಲಹೆ ನೀಡಿದ್ದರು. ಈ ಸಲಹೆಗೆ ಗಂಗುಲಿ ಹಾಗೂ ಠಾಕೂರ್ ಬೆಂಬಲ ವ್ಯಕ್ತಪಡಿಸಿದ್ದರು. 2016-17ರ ಸಾಲಿನ ರಣಜಿ ಟ್ರೋಫಿ ಋತುವಿನ ದಿನಾಂಕ ಹಾಗೂ ಸ್ಥಳಗಳನ್ನು ಅತೀ ಶೀಘ್ರವೇ ಘೋಷಿಸಲಾಗುತ್ತದೆ.
ಮುಶ್ತಾಕ್ ಅಲಿ ಟ್ರೋಫಿಯ ಬದಲಿಗೆ ನೂತನ ಲೀಗ್:
ಭಾರತದ ಪ್ರಮುಖ ದೇಶೀಯ ಟ್ವೆಂಟಿ-20 ಟೂರ್ನಮೆಂಟ್ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ಬದಲಿಗೆ ನೂತನ ಲೀಗ್ ಆರಂಭಿಸುವ ಕುರಿತಂತೆ ಬಿಸಿಸಿಐ ಶುಕ್ರವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ನೂತನ ಲೀಗ್‌ನಲ್ಲಿ ಎಲ್ಲ ರಾಜ್ಯ ತಂಡಗಳು ಸಂಬಂಧಿತ ವಲಯಗಳಲ್ಲಿ ಅಂತರ್-ವಲಯ ಲೀಗ್‌ನಲ್ಲಿ ಆಡಲಿವೆ. ಆ ಬಳಿಕ ಎಲ್ಲ ಐದು ವಲಯಗಳು ಅಂತರ್-ವಲಯ ಲೀಗ್ ಆಡಲು ವಲಯ ತಂಡವನ್ನು ಆಯ್ಕೆ ಮಾಡಲಿವೆ. ಬಿಸಿಸಿಐ ತಾಂತ್ರಿಕ ಸಮಿತಿಯು ದುಲೀಪ್ ಟ್ರೋಫಿಯಲ್ಲಿ ವಲಯವಾರು ಪದ್ಧತಿಯನ್ನು ತೆಗೆದುಹಾಕುವಂತೆ ಸಲಹೆ ನೀಡಿದ್ದವು. ಅದರ ಬದಲಿಗೆ ನಾಲ್ಕು ಅಖಿಲ-ಭಾರತ ಮಟ್ಟದ ತಂಡಗಳನ್ನು ರಾಷ್ಟ್ರೀಯ ಆಯ್ಕೆಗಾರರು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿತ್ತು. ಆದರೆ, ತಾಂತ್ರಿಕ ಸಮಿತಿಯ ಈ ಸಲಹೆಯನ್ನು ಕಾರ್ಯಕಾರಿಣಿ ಸಮಿತಿಯು ಮಾನ್ಯ ಮಾಡಲಿಲ್ಲ.







