ಪೋಷಕರ ಬಗ್ಗೆಯೂ ಕರುಣೆಯಿರಲಿ
ಮಾನ್ಯರೆ,
ಮೊನ್ನೆ ಕುಂದಾಪುರ ತ್ರಾಸಿಯಲ್ಲಿ ನಡೆದ ಭೀಕರ ಅವಘಡದಿಂದಾಗಿ ಎಳೆಯ ಕಂದಮ್ಮಗಳನ್ನು ಕಳೆದುಕೊಂಡಿರುವ ಸುದ್ದಿ ನೋವು ತರುವ ವಿಷಯವಾಗಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದ ವಾಹನದಲ್ಲಿ ಮಕ್ಕಳ ಸಂಖ್ಯೆ ಮಿತಿಮೀರಿತ್ತು ಮತ್ತು ಅವಸರದ ಚಾಲನೆಯೂ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈಗ ಉಭಯ ಜಿಲ್ಲೆಯಾದ್ಯಂತ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ರಿಕ್ಷಾ, ಒಮ್ನಿ ಮುಂತಾದ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಹಾಗಾಗಿ ಇಂತಹ ವಾಹನ ಚಾಲಕರು ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ಮೊನ್ನೆಯಿಂದ ಹಠಾತ್ ನಿಲ್ಲಿಸಿದ್ದಾರೆ. ಕೆಲವರಂತೂ ಮಕ್ಕಳ ಪೋಷಕರಿಗೆ ಯಾವುದೇ ಸೂಚನೆ ಕೊಡದೆ ಬರುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಕೆಲವು ಮಕ್ಕಳು ಪರ್ಯಾಯ ವ್ಯವಸ್ಥೆಯಿಲ್ಲದೆ ಅನಿವಾರ್ಯವಾಗಿ ಶಾಲೆಗೆ ಗೈರುಹಾಜರಾಗಬೇಕಾಗಿದೆ. ಮಕ್ಕಳ ತಿಂಗಳ ಶಾಲಾವಾಹನಗಳ ಖರ್ಚು ಇಂತಿಷ್ಟೆಂದು ತಮ್ಮ ಬಜೆಟ್‌ನಲ್ಲಿ ಎತ್ತಿಟ್ಟು, ಒಂದು ವ್ಯವಸ್ಥೆಗೆ ಒಗ್ಗಿಕೊಂಡಿದ್ದ ಪೋಷಕರು ಇಂತಹ ದಿಢೀರ್ ಬೆಳವಣಿಗೆಯಿಂದ ಕಂಗೆಡುವಂತಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಉಭಯ ಜಿಲ್ಲಾಡಳಿತಗಳ ಕ್ರಮ ಸರಿಯಾದುದೆ. ಆದರೆ ಇಂತಹ ಕ್ರಮಗಳಿಗೆ ಬಲಿಯಾಗುವ ಮಕ್ಕಳ ಪೋಷಕರ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸ್ವಂತ ವ್ಯವಸ್ಥೆ ಇಲ್ಲದೆ ಇಂತಹ ವಾಹನಗಳನ್ನು ತಮ್ಮ ಹಣದ ಮಿತಿಗಾಗಿ ಅವಲಂಬಿಸಬೇಕಾದ ಬಡ ಪೋಷಕರನ್ನು ವಾಹನಿಗರು ಇನ್ನು ತಾವು ಕರೆದುಕೊಂಡು ಹೋಗುವ ಸಂಖ್ಯೆಗನುಗುಣವಾಗಿ ದುಬಾರಿ ಶುಲ್ಕ ವಸೂಲಿ ಮಾಡಲಾರಂಭಿಸಿದರೆ ಈ ಹೊರೆಯನ್ನು ಭರಿಸಲು ಬಡಪೋಷಕರಿಂದ ಸಾಧ್ಯವೇ?





