ಜು.1ರಿಂದ ಟಿಕೆಟಿಂಗ್ ನಿಯಮದಲ್ಲಿ ಯಾವುದೇ ಬದಲಾವಣೆಯಿಲ್ಲ: ರೈಲ್ವೆ
ಹೊಸದಿಲ್ಲಿ, ಜೂ.24: ವೇಟಿಂಗ್ ಲಿಸ್ಟಲ್ಲಿರುವ ಹಾಗೂ ತತ್ಕಾಲ್ ಟಿಕೆಟ್‌ಗಳ ಬುಕ್ಕಿಂಗ್ ಹಾಗೂ ರದ್ದತಿಗೆ ಸಂಬಂಧಿಸಿ ಜುಲೈ 1ರಿಂದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲವೆಂದು ರೈಲ್ವೆಯು ಇಂದು ಸ್ಪಷ್ಟಪಡಿಸಿದೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಗಳು ಬದಲಾಗಲಿವೆಯೆಂದು ಪ್ರಕಟವಾಗಿತ್ತು.
ಜುಲೈ 1ರಿಂದ ಅನೇಕ ಬದಲಾವಣೆಗಳು ಹಾಗೂ ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುವುದೆಂಬ ಸುದ್ದಿಯೊಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆ, ವಾಟ್ಸ್ ಆ್ಯಪ್ ಗುಂಪು ಹಾಗೂ ಕೆಲವು ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಅದು ಸುಳ್ಳು ಹಾಗೂ ಆಧಾರರಹಿತವಾಗಿದೆ. ಭಾರತೀಯ ರೈಲ್ವೆ ವ್ಯವಸ್ಥೆಯ ಅಧಿಕೃತ ಮೂಲಗಳಿಂದ ಖಚಿತಪಡಿಸಿಕೊಳ್ಳದೆ ಮಾಧ್ಯಮದ ಒಂದು ವರ್ಗವೂ ಇಂತಹ ಸುದ್ದಿ ಪ್ರಕಟಿಸಿದೆ. ಅದು ಜನರಲ್ಲಿ ಗೊಂದಲವನ್ನುಂಟುಮಾಡಿದೆಯೆಂದು ರೈಲ್ವೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಶತಾಬ್ದಿ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಹಾಗೂ ರೈಲಿನ ಯಾವುದೇ ದರ್ಜೆ ಗಳಲ್ಲಿ ಕಾಗದದ ಟಿಕೆಟ್ ನಿಲ್ಲಿಸುವ ಪ್ರಸ್ತಾವವಿಲ್ಲ. ಆದಾಗ್ಯೂ, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ, ಎಸ್‌ಎಂಎಸ್‌ನಲ್ಲಿ ಪಡೆದ ಟಿಕೆಟ್, ಅನುಮತಿಸಲಾದ ಗುರುತಿನ ಪುರಾವೆಯೊಂದಿಗೆ ರೈಲು ಪ್ರಯಾಣ ಮಾಡಲು ಮಾನ್ಯತೆ ಹೊಂದಿದ ದಾಖಲೆಯಾಗಿರುತ್ತದೆಂದು ಅದು ಹೇಳಿದೆ.
2015ರ ನವೆಂಬರ್‌ನಲ್ಲಿ ಅಧಿಸೂಚಿಸಲಾಗಿರುವ ಮರುಪಾವತಿ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಪ್ರಕಟನೆ ತಿಳಿಸಿದೆ.
ರೈಲ್ವೆಯು ಅಕ್ಟೋಬರ್‌ನಲ್ಲಿ ತನ್ನ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.





