ಒಡಿಶಾದಲ್ಲಿ ಕೇಂದ್ರ ಸಚಿವರ ವಾಹನಗಳ ಸಾಲಿಗೆ ಕಲ್ಲುತೂರಾಟ
ಬರಗಡ್,ಜೂ.24: ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದ ಕೇಂದ್ರ ಜವಳಿ ಸಚಿವ ಸಂತೋಷ ಗಂಗ್ವಾರ್ ಮತ್ತು ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಕಾರುಗಳ ಸಾಲಿನತ್ತ ಕಲ್ಲುತೂರಾಟ ನಡೆಸಿದ ಕೆಲವು ಶಾಸಕರು ಸೇರಿದಂತೆ ಬಿಜೆಡಿ ಕಾರ್ಯಕತರು ಕರಿ ಪತಾಕೆಗಳನ್ನು ಪ್ರದರ್ಶಿಸಿದರು. ಕೇಂದ್ರದ ಎನ್‌ಡಿಎ ಸರಕಾರವು ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಇಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿಯ ವಿಕಾಸ ಪರ್ವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಚಿವರು ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಠ ಒಂಭತ್ತು ಪೊಲೀಸ್ ಪ್ಲಟೂನ್‌ಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಪ್ರತಿಭಟನಾನಿರತ ಬಿಜೆಡಿ ಬೆಂಬಲಿಗರು ಕರಿ ಪತಾಕೆಗಳನ್ನು ಪ್ರದರ್ಶಿಸಿದರಲ್ಲದೆ ಗಂಗ್ವಾರ್ ಅವರ ಕಾರಿನೆದುರು ಮತ ಪ್ರದರ್ಶನ ನಡೆಸಿದರು. ಗಂಗ್ವಾರ್ ಕುಳಿತಿದ್ದ ಕಾರು ಸೇರಿದಂತೆ ಕನಿಷ್ಠ ಮೂರು ಕಾರುಗಳಿಗೆ ಹಾನಿಯಾಗಿದೆ ಎಂದರು.
ಬಿಜೆಡಿ ನಾಯಕರು ಮತ್ತು ಬೆಂಬಲಿಗರು ಕರಿ ಪತಾಕೆಗಳನ್ನು ಪ್ರದರ್ಶಿಸುತ್ತಿದ್ದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭುರುಗು ಬಕ್ಷಿಪಾತ್ರ ಅವರು ಆರೋಪಿಸಿದರು.
ಘಟನೆಯಿಂದ ವಿಚಲಿತರಾಗದ ಗಂಗ್ವಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಗದಿತ ತಾಣವನ್ನು ತಲುಪಿದರು. ಬಿಜೆಪಿ ಕಾರ್ಯಕರ್ತರು ಬಿಜೆಡಿ ಕಾರ್ಯಕರ್ತರನ್ನು ವಿರೋಧಿಸಿದಾಗ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿತ್ತು.
ಬಿಜೆಪಿಯ ಬಿಕಾಸ ಪರ್ವವನ್ನು ವಿರೋಧಿಸಿ ಬರಗಡ್ ಶಾಸಕ ದೇಬೇಶ್ ಆಚಾರ್ಯ ನೇತೃತ್ವದಲ್ಲಿ ಬಿಜೆಡಿ ಕಾರ್ಯಕರ್ತರು ಬೆಳಗ್ಗೆ ನಗರದಲ್ಲಿ ಬೈಕ್ ರ್ಯಾಲಿಯನ್ನೂ ನಡೆಸಿದ್ದರು.
ಗಂಗ್ವಾರ್ ಅವರು ಕೆಲವು ನೇಕಾರರೊಂದಿಗೆ ಮಾತುಕತೆ ನಡೆಸಲಿದ್ದ ಸೀರೆಗಳ ಶೋ ರೂಮ್‌ಗೂ ನುಗ್ಗಿ ಬಿಜೆಡಿ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆಯನ್ನು ಖಂಡಿಸಿರುವ ಗಂಗ್ವಾರ್,ರಾಜ್ಯದಲ್ಲಿ ಕೇಂದ್ರ ಸಚಿವರಿಗೇ ಭದ್ರತೆ ಇಲ್ಲದಿರುವಾಗ ಜನಸಾಮಾನ್ಯರು ಶಾಂತಿಯಿಂದ ಬದುಕಬಹುದೇ ಎನ್ನುವುದರ ಬಗ್ಗೆ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಯೋಚಿಸಬೇಕು ಎಂದಿದ್ದಾರೆ.







