ಬೋರಿಸ್ ಜಾನ್ಸನ್ ಮುಂದಿನ ಬ್ರಿಟನ್ ಪ್ರಧಾನಿ?

ಲಂಡನ್: ಬ್ರುಸೆಲ್ಸ್ ಮೂಲದ ಮಾಜಿ ಪತ್ರಕರ್ತ, ಲಂಡನ್ ನ ಮಾಜಿ ಮೇಯರ್ ಹಾಗೂ ಬ್ರೆಕ್ಸಿಸ್ಟ್ ಆಂದೋಲನದ ನೇತಾರ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿ ಹಾಗೂ ಪ್ರಧಾನಿಯಾಗಿ ಮುಂದಿನ ಅಕ್ಟೋಬರ್ ನಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತ.
ಕ್ರೈಸ್ತ ಧರ್ಮೀಯರಲ್ಲಿ ಮತ್ತು ಲಂಡನ್ ನಲ್ಲಿ ಅತ್ಯಂತ ಜನಪ್ರಿಯ ನಾಯಕರಾದ ಜಾನ್ಸನ್, ಬ್ರಿಟನ್ ನ ಇತರ ಭಾಗಗಳಲ್ಲಿ ಅಷ್ಟೊಂದು ಪರಿಚಿತರಲ್ಲ. ಆದರೆ ಐತಿಹಾಸಿಕ ಬ್ರೆಕ್ಸಿಸ್ಟ್ ಆಂದೋಲನದಲ್ಲಿ ರಸ್ತೆ ಪ್ರತಿಭಟನೆ ಹಾಗೂ ಟೆಲಿವಿಷನ್ ಚರ್ಚೆಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಕ್ಯಾಮರೂನ್ ಅವರ ಉತ್ತರಾಧಿಕಾರಿಯಾಗುವ ಅವರ ರಾಜಕೀಯ ಆಕಾಂಕ್ಷೆ ಎಲ್ಲರಿಗೂ ತಿಳಿದ ವಿಚಾರ. ಆದರೆ ಡೌನಿಂಗ್ ಸ್ಟ್ರೀಟ್ ನ ನಂ.10ಕ್ಕೆ ಅವರನ್ನು ಕರೆದೊಯ್ಯಲು, ಬ್ರಿಟನ್ ನ ಮಹತ್ವದ ಜನಮತಗಣನೆ ಕಾರಣವಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ.
ಆರು ವರ್ಷಗಳ ಅಧಿಕಾರಾವಧಿ ಅಂತ್ಯವಾಗುವ ಹೊಸ್ತಿಲಲ್ಲಿರುವ ಡೇವಿಡ್ ಕ್ಯಾಮರೂನ್ ತಮ್ಮ ಅಧಿಕಾರಾವಧಿಯಲ್ಲಿ ಲೇಬರ್ ಪಕ್ಷಕ್ಕೆ ಭಾರತೀಯ ಸಮುದಾಯದ ಬೆಂಬಲ ಗಳಿಸಲು ಸರ್ವ ಪ್ರಯತ್ನ ನಡೆಸಿದ್ದರು. ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಲ್ಲದೇ, ಭಾರತ ಜತೆಗಿನ ವ್ಯಾಪಾರ ಸಂಬಂಧವನ್ನು ವೃದ್ಧಿಸಲು ಗಣನೀಯವಾಗಿ ಶ್ರಮಿಸಿದ್ದರು. ಕಳೆದ ನವೆಂಬರ್ ನಲ್ಲಿ ಮೋದಿ ಬ್ರಿಟನ್ ಗೆ ಭೇಟಿ ನೀಡಿದ್ದಾಗ ಉಭಯ ನಾಯಕರ ನಡುವಿನ ನಂಟು ಮತ್ತಷ್ಟು ಬಲಗೊಂಡಿತ್ತು.
ಪ್ರಸ್ತುತ ಬ್ರೆಕ್ಸಿಸ್ಟ್ ಹೋರಾಟ ಕ್ಯಾಂಪ್ ನಲ್ಲಿ ಭಾರತ ಮೂಲದ ಉದ್ಯೋಗ ಖಾತೆ ಸಚಿವೆ ಪ್ರೀತಿ ಪಟೇಲ್ ಕೂಡಾ ಮುಂಚೂಣಿಯಲ್ಲಿದ್ದರು. ಕ್ಯಾಮರೂನ್ ಸಂಪುಟದ ಆರು ಸದಸ್ಯರು ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಬ್ರೆಕ್ಸಿಸ್ಟ್ ಪರ ಪ್ರಧಾನಿಯಾಗಿ ಜಾನ್ಸನ್ ಆಯ್ಕೆಯಾದರೆ, ಪ್ರೀತಿ ಪಟೇಲ್ ಗೆ ಭಡ್ತಿ ಸಿಗುವ ಎಲ್ಲ ಸಾಧ್ಯತೆಗಳೂ ಇವೆ.







