ವಾಟ್ಸ್ಆಪ್ ನಿಂದ ದೇಶದ ಸುರಕ್ಷತೆಗೆ ಅಪಾಯ, ಅದನ್ನು ನಿಷೇಧಿಸಿ!
ಸುಪ್ರೀಂಕೋರ್ಟ್ ಗೆ ಮನವಿ: ಮುಂದಿನ ವಾರ ವಿಚಾರಣೆ

ಹೊಸದಿಲ್ಲಿ: ವಾಟ್ಸ್ ಆಪ್ ಆರಂಭಿಸಿರುವ "ಎಂಡ್ ಟೂ ಎಂಡ್ ಎನ್ಕ್ರಿಪ್ಷನ್" (ಗೂಢಲಿಪಿ) ಸೇವೆಯಿಂದ ದೇಶದ ಭದ್ರತೆಗೆ ಅಪಾಯವಿದ್ದು, ಇದನ್ನು ತಕ್ಷಣ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಂದಿನ ಬುಧವಾರ ವಿಚಾರಣೆ ನಡೆಸಲಿದೆ.
ಈ ಗೂಢಲಿಪಿ ಸೇವೆಯು ಉಗ್ರಗಾಮಿಗಳಿಗೆ ಸಂವಹನ ಮಾರ್ಗವನ್ನು ಕಲ್ಪಿಸಿಕೊಡಲಿದ್ದು, ಇವುಗಳನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಹರ್ಯಾಣ ಮೂಲದ ಮಾಹಿತಿ ಹಕ್ಕು ಹೋರಾಟಗಾರ ಸುಧೀರ್ ಯಾದವ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್ ನಿಂದ ವಾಟ್ಸಾಪ್ ಅರಂಭಿಸಿರುವ 265 ಬಿಟ್ ಗೂಢಲಿಪಿಯನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅವರ ವಾದ.
ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಏನು ಮಾಹಿತಿ ಕಳುಹಿಸಿದ್ದಾನೆ ಎನ್ನುವುದು ತಿಳಿದುಕೊಳ್ಳಲು ಗೂಢಲಿಪಿಯನ್ನು ಬಹಿರಂಗಪಡಿಸುವಂತೆ ವಾಟ್ಸ್ ಆಪ್ ಗೆ ಕೇಳಿದರೂ, ಅದನ್ನು ಮಾಡಲು ಅವರಿಗೆ ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಈ ಸೇವೆಯ ಮೂಲಕ ಉಗ್ರಗಾಮಿಗಳು ಹಾಗೂ ಸಮಾಜ ಘಾತುಕ ಶಕ್ತಿಗಳು ಸುರಕ್ಷಿತವಾಗಿ ಈ ವಿಧಾನದ ಮೂಲಕ ಸಂವಾದ ನಡೆಸಬಹುದಾಗಿದೆ. ಇದು ಭಾರತದ ಗುಪ್ತಚರ ಏಜೆನ್ಸಿಗಳ ಪಾಲಿಗೆ ಕೂಡಾ ಮಾರಕ ಎಂದು ಅವರು ವಾದಿಸಿದ್ದಾರೆ.





