ಬಾಬರಿ ಮಸಿದಿ ಧ್ವಂಸದ ಬಳಿಕ ಸೋನಿಯಾ, ತನ್ನ ಸಚಿವರ ಹಿಂದೆ ಬೇಹು ಅಧಿಕಾರಿಗಳನ್ನು ಬಿಟ್ಟಿದ್ದ ನರಸಿಂಹ ರಾವ್

ಹೊಸದಿಲ್ಲಿ, ಜೂ.25: ಬಾಬರಿ ಮಸ್ಜಿದ್ ಧ್ವಂಸವಾಗಿರುವ ಬೆನ್ನಲ್ಲೆ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್‌ಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಉಂಟಾಗಿತ್ತು. ಈ ಘಟನೆ ನಡೆದ ಮರುದಿನವೇ ನರಸಿಂಹ ರಾವ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ತನ್ನ ಸಚಿವ ಸಂಪುಟದ ಸಚಿವರುಗಳ ಮೇಲೆ ಗುಪ್ತಚರ ಇಲಾಖೆ ಮೂಲಕವಾಗಿ ನಿಗಾ ಇರಿಸಿದ್ದರು ಎಂದು ಎಂದು ನರಸಿಂಹ ರಾವ್‌ಗೆ ಆಪ್ತರಾಗಿದ್ದ ವಿನಯ್ ಸೀತಾಪತಿ ಎಂಬುವವರು ಬರೆದಿರುವ ಹಾಫ್ ಲಯನ್: ಹೌ ಪಿವಿ ನರಸಿಂಹರಾವ್ ಟ್ರಾನ್ಸ್ ಫಾರ್ಮ್ಡ್ ಇಂಡಿಯಾ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಸೋನಿಯಾ ಮತ್ತು ಪಿವಿ ನರಸಿಂಹರಾವ್ ಅವರ ನಡುವಿನ ಜಟಾಪಟಿಯ ಅನೇಕ ವಿಚಾರಗಳು ಪುಸ್ತಕದಲ್ಲಿ ಉಲ್ಲೇಖಗೊಂಡಿದ್ದು, ವಿನಯ್ ಅವರ ಕೃತಿ ಇದೇ ಜೂನ್ 27ರಂದು ಬಿಡುಗಡೆಯಾಗಲಿದೆ
ಮಸೀದಿ ಧ್ವಂಸ ಪ್ರಕರಣದಲ್ಲಿ ಪಿವಿ ನರಸಿಂಹರಾವ್ ವಿರುದ್ಧ ಜನರು ರೊಚ್ಚಿಗೆದ್ದಾಗ ಅವರು ತನಗೆ ಆಪ್ತರಾದ ಕಾಂಗ್ರೆಸ್ ನಾಯಕರು ಯಾರು ಮತ್ತು ವಿರೋಧಿಗಳು ಯಾರು ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಸೋನಿಯಾ ಮನೆಗೆ ಕಳುಹಿಸಿದ್ದರು ಎಂದು ವಿನಯ್ ಸೀತಾಪತಿ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಗುಪ್ತಚರ ಇಲಾಖೆಯ ಅಧಿಕಾರಿಗಳು ದೇಶಾದ್ಯಂತ ಸುತ್ತಿ ಮಾಹಿತಿ ಕಲೆ ಹಾಕಿ ಪಿ.ವಿ. ನರಸಿಂಹ ರಾವ್‌ಗೆ ವರದಿ ನೀಡುತ್ತಿದ್ದರು. ಸೋನಿಯಾ ಗಾಂಧಿ ಅವರ ಮನೆಗೆ ಆಗಮಿಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಸಚಿವರುಗಳ ಬಗ್ಗೆ ವರದಿ ರವಾನೆಯಾಗುತ್ತಿತ್ತು.
ತಮಿಳುನಾಡಿನಮಣಿಶಂಕರ್ ಅಯ್ಯರ್ ಅವರು ಬಾಬ್ರಿ ವಿಚಾರದಿಂದ ಸೋನಿಯಾ ಗಾಂಧಿ ಮೇಲೆ ನಿಷ್ಠೆ ಹೊಂದಿದ್ದಾರೆ.ಕರ್ನಾಟಕ ಕ್ರೈಸ್ತ ಸಮುದಾಯದ ಮಾರ್ಗರೇಟ್ ಆಳ್ವಾ ಕೂಡ ಸೋನಿಯಾ ಪರ ಒಲವು ಹೊಂದಿದ್ದಾರೆ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪಕ್ಷದ ಸಂಘಟನೆಗೆ ಬಳಸಿಕೊಳ್ಳಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದರು ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ.
ಅಷ್ಟು ಮಾತ್ರವಲ್ಲ ಕೆಲವು ಸಂಪುಟ ಸಚಿವರುಗಳೇ ಸಚಿವ ಸಂಪುಟದ ಸಭೆಯಲ್ಲಿ ನಡೆಯುತ್ತಿದ್ದ ವಿಚಾರಗಳನ್ನು ಸೋನಿಯಾ ಅವರಿಗೆ ತಲುಪಿಸುತ್ತಿದ್ದರು. ಆದರೆ ರಾವ್ ಅವರು ಸೋನಿಯಾ ಅವರಿಗೆ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತಿರಲಿಲ್ಲ.
ನರಸಿಂಹರಾವ್ ಅವರ ವಿರುದ್ಧ ಅಸಮಾಧಾನಗೊಂಡಿದ್ದ ಸೋನಿಯಾ ಬಳಿಕ ರಾವ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೆ ಅವರನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾಗಿದ್ದರು. 2004ರಲ್ಲಿ ಅವರು ಸಾವನ್ನಪ್ಪಿದಾಗ ದಿಲ್ಲಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಿರಲಿಲ್ಲ ಎಂದು ಪುಸ್ತಕದಲ್ಲಿ ವಿನಯ್ ಸೀತಾಪತಿ ತಿಳಿಸಿದ್ದಾರೆ.







