ಭಿನ್ನಮತ ಬೇಡ: ಕಿಮ್ಮನೆ ಕಿವಿಮಾತು

ಬೆಂಗಳೂರು, ಜೂ. 25: ಸಚಿವ ಸಂಪುಟ ಪುನಾರಚನೆಯಿಂದ ಉಂಟಾಗಿರುವ ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಂಡು ಮುಖ್ಯಮಂತ್ರಿಗೆ ಹಾಗೂ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಹಾಗೂ ಪಿ.ಟಿ.ಪರಮೇಶ್ವರ್ ನಾಯಕ್ ಭಿನ್ನಮತೀಯರಿಗೆ ಸಲಹೆ ಮಾಡಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಮ್ಮನೆ ರತ್ನಾಕರ, ಅಧಿಕಾರದ ಆಮಿಷ ಹಾಗೂ ಭ್ರಷ್ಟಾಚಾರದಿಂದ ಹಿಂದಿನ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡಿತ್ತು. ಇದರಿಂದ ನಾವು ಪಾಠ ಕಲಿಯುವ ಜೊತೆಗೆ ಸಚಿವ ಸಂಪುಟ ಪುನಾರಚನೆಯಿಂದ ಬಂದಿರುವ ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಕುಟುಂಬದೊಳಗಿನ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ ಎಂದು ನುಡಿದರು.
ಅಸಮರ್ಥರು ಅಥವಾ ಅನರ್ಹರು ಎಂಬ ಕಾರಣದಿಂದ ಯಾರನ್ನೂ ಸಚಿವ ಸಂಪುಟದಿಂದ ಕೈಬಿಟ್ಟಿಲ್ಲ. ಇತರೆ ಕಾಂಗ್ರೆಸ್ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೆಲವರನ್ನು ಕೈಬಿಡಲಾಗಿದೆ. ಇದು ಹೈಕಮಾಂಡ್‌ನ ನಿರ್ಧಾರ. ಮತ್ತೊಬ್ಬರಿಗೆ ಅವಕಾಶ ನೀಡಲು ಎಲ್ಲರೂ ಕೈಜೋಡಿಸಬೇಕು. ಇದರಿಂದ ಪಕ್ಷವು ಬಲಗೊಳ್ಳಲಿದೆ ಎಂದು ಕಿಮ್ಮನೆ ಹೇಳಿದರು.
ಯಾವುದೇ ವಿಷಯದಲ್ಲಿ ಅಸಮಾಧಾನ, ಪ್ರತಿರೋಧ, ನೋವು, ಪಕ್ಷದೊಳಗೆ ಇತ್ಯರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಪಕ್ಷದ ಅಧ್ಯಕ್ಷರಿಗೆ, ಉತ್ತಮ ಸರಕಾರ ನೀಡಲು ಸಹಕಾರ ನೀಡಬೇಕಾಗಿದೆ. ಎಲ್ಲರಿಗೂ ಮಂತ್ರಿಯಾಗುವ ಸಾಮರ್ಥ್ಯ ಇದೆ. ನಮ್ಮನ್ನು ಮೊದಲ ಪಂಕ್ತಿಯಲ್ಲಿ ಗುರುತಿಸಿದ್ದಾರೆ ಎಂದ ಅವರು, ಪಕ್ಷದಲ್ಲಿರುವ ಬಿಕ್ಕಟ್ಟು, ವೈಯಕ್ತಿಕ ನೋವನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳಬೇಕು. ನಮಗೆ ಕೊಟ್ಟ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಬೇರೆಯವರಿಗೂ ಅವಕಾಶ ಮಾಡಿಕೊಡುವುದು ನಮ್ಮ ಕರ್ತವ್ಯ ಎಂದರು. ಕಾಗೋಡಿಗಾಗಿ ತ್ಯಾಗ: ಸಚಿವ ಕಾಗೋಡು ತಿಮ್ಮಪ್ಪ ಅವರು ನನಗಿಂತ ಬಹಳಷ್ಟು ಅನುಭವಿಗಳು. ಐದು ಬಾರಿ ಶಾಸಕರಾಗಿ, ಮಾಜಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದವರು. ಅವರು ಮಂತ್ರಿಯಾಗಲು ನಾನು ಅಡ್ಡಿಯಾಗಲಾರೆ. ಕಾಗೋಡಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದ ಅವರು, ಅತ್ಯಂತ ಸಂತೋಷದಿಂದ ಸಿಎಂ ನಿರ್ಧಾರಕ್ಕೆ ನಾನು ಒಪ್ಪಿಕೊಂಡಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿಯೇ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಿಮ್ಮನೆ, ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದ ನನ್ನನ್ನು ಕೈಬಿಟ್ಟಿದ್ದಾರೆ ಎನ್ನುವ ಮಾತು ಸುಳ್ಳು. ಅಲ್ಲದೆ, ಹಿರಿಯ ಮುಖಂಡರೊಬ್ಬರು ಪ್ರತಿ ವರ್ಷ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತದೆ. ನೀವು ಸುಮ್ಮನಿರಿ ಎಂದು ಸಲಹೆ ಮಾಡಿದ್ದರು. ಆದರೆ, ನಾನು ಅದಕ್ಕೆ ಒಪ್ಪಿರಲಿಲ್ಲ. ಇನ್ನು ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನನ್ನ ಕಚೇರಿಯಿಂದಲೇ ಮೊದಲು ಆರಂಭಿಸಿ ಎಂದು ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದೆ ಎಂದರು.
ಗೂಟದ ಕಾರು, ಅಧಿಕಾರವಿದ್ದರೆ ಮಾತ್ರ ಸಾಧನೆ ಮಾಡಬಹುದು ಎಂಬುದರಲ್ಲಿ ಅರ್ಥವಿಲ್ಲ. ಗಾಂಧಿ, ಬಸವ, ಲೋಹಿಯಾ ಅಧಿಕಾರ ಪಡೆಯದೆ ಸಮಾಜ ಪರಿವರ್ತನೆ ಮಾಡಿದರು. ಅಧಿಕಾರವಿಲ್ಲದವರೇ ಇಂದು ಜನಮಾನಸದಲ್ಲಿ ಉಳಿದಿದ್ದಾರೆ ಎಂದ ಅವರು, ಪಕ್ಷದಲ್ಲಿ ಮುಖ್ಯಮಂತ್ರಿ ವಿರೋಧಿ ಅಲೆ ಇಲ್ಲ ಎಂದು ಹೇಳಿದರು.
ಮಾಜಿ ಸಚಿವ ಪರಮೇಶ್ವರ್ ನಾಯಕ್ ಮಾತನಾಡಿ, ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಅವರ ಪ್ರಕರಣಕ್ಕೂ, ಮಂತ್ರಿ ಸ್ಥಾನಕ್ಕೂ ಸಂಬಂಧವಿಲ್ಲ. ಪಕ್ಷ ಕೊಟ್ಟ ತೀರ್ಮಾನಕ್ಕೆ ನಾವು ಬದ್ಧ. ನನ್ನಂತಹವನನ್ನು ಗುರುತಿಸಿದ್ದು ದೊಡ್ಡ ನಿರ್ಧಾರ. ಅಲ್ಲದೆ, ಸಮರ್ಥರು, ಅಸಮರ್ಥರು ಎಂಬ ವಿಚಾರ ಪಕ್ಷದಲ್ಲಿಲ್ಲ. ಸಿಎಂ ನಿರ್ಧಾರಕ್ಕೆ ನಮ್ಮ ಒಪ್ಪಿಗೆಯಿದೆ ಎಂದರು.
ಬಾಕ್ಸ್ ‘ಪ್ರದೇಶ, ಜಾತಿ, ಸಾಮರ್ಥ್ಯ ಹಾಗೂ ಅರ್ಹತೆಯನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡಬೇಕಾಗುತ್ತದೆ. ದೇಶದಲ್ಲೇ ಇಂತಹ ವ್ಯವಸ್ಥೆಯಿದ್ದು, ಇಂದಿಗೂ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ’ -ಕಿಮ್ಮನೆ ರತ್ನಾಕರ, ಮಾಜಿ ಸಚಿವರು





