ಹಿರೇಬಂಡಾಡಿ: ಅಡೆಕಲ್ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ, ಧರಣಿ

ಉಪ್ಪಿನಂಗಡಿ, ಜೂ.25: ಹಿರೇಬಂಡಾಡಿ ಗ್ರಾಮದ ದಾಸರಮೂಲೆಯಿಂದ ಅಡೆಕ್ಕಲ್ ತನಕದ ರಸ್ತೆ ಕುಲಗೆಟ್ಟು ಹೋಗಿದ್ದು, ಗ್ರಾಮಸ್ಥರು ಓಡಾಡುವುದಕ್ಕೂ ಅಸಾಧ್ಯವಾಗಿದೆ. ಇದನ್ನು ಶ್ರೀ ಡಾಮರೀಕರಣ ಮಾಡಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ದಾಸರಮೂಲೆ ಎಂಬಲ್ಲಿ ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು.
ಅಡೆಕ್ಕಲ್ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ಪಿ. ಅಬ್ದುರ್ರಹ್ಮಾನ್ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮಸ್ಥರು ದಾಸರಮೂಲೆ ಎಂಬಲ್ಲಿ ರಸ್ತೆಗೆ ತಡೆ ಒಡ್ಡಿ ಪ್ರತಿಭಟನೆ ನಡೆಸಿ ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿದರು.
ಅಡೆಕಲ್‌ನಿಂದ ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು, ಈ ಭಾಗದ 100ಕ್ಕೂ ಅಧಿಕ ಮನೆಗಳವರು ಈ ರಸ್ತೆಯನ್ನು ಅವಲಂಬಿಸಿರುತ್ತಾರೆ. ದಾಸರಮೂಲೆಯಿಂದ ಅಡೆಕ್ಕಲ್ ತನಕದ ಈ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಯಾಗಿದ್ದು, ಕಳೆದ 15 ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದು, ಶೀಘ್ರ ದುರಸ್ಥಿ ಮಾಡುವಂತೆ ಆಗ್ರಹಿಸಿದರು.
ಹೆದ್ದಾರಿ ತಡೆ ಎಚ್ಚರಿಕೆ
ಈ ರಸ್ತೆ ದುರಸ್ತಿ ಬಗ್ಗೆ ಕಳೆದ 3 ವರ್ಷಗಳಿಂದ ಹಲವು ಬಾರಿ ಜನಪ್ರತಿನಿಧಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರಿಂದಲೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದ ಪ್ರತಿಭಟನಾಕಾರರು ಈ ಬಾರಿ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಳೆಗಾಲ ಬಳಿಕ ಡಾಮರೀಕರಣ: ಪ್ರಕಾಶ್ ರೈ ರವಸೆ
ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಮ್ಮಬ್ಬ ಸೌಕತ್ ಆಲಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದರು. ಬಳಿಕ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಶಾಸಕರು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಡಾಮರೀಕರಣ ಸಲುವಾಗಿ ತೀರಾ ಹದಗೆಟ್ಟಿರುವ ರಸ್ತೆ ಬಗ್ಗೆ ಮಾಹಿತಿ ಕೇಳಿದ್ದರು. ಅದರಂತೆ ಈ ರಸ್ತೆಯನ್ನು ತಿಳಿಸಿರುತ್ತೇನೆ. ಈಗಾಗಲೇ ಶಾಸಕರ ಮೂಲಕ ಈ ರಸ್ತೆಯ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಮಳೆಗಾಲ ಮುಗಿದ ತಕ್ಷಣ ಡಾಮರೀಕರಣ ಆಗಲಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ರಸ್ತೆ ಡಾಮರೀಕರಣ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ಮೊದಲಾದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿ ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ಅಡೆಕ್ಕಲ್ ಮಸೀದಿ ಖತೀಬ್ ಹಾರಿಸ್ ಕೌಸರಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಮೇಶ್ ಸಿದ್ಯೊಟ್ಟು, ಪದಾಧಿಕಾರಿಗಳಾದ ರಮಾನಂದ ಪೆರಾಬೆ, ವಕೀಲ ರಹಿಮಾನ್ ಬಂಡಾಡಿ, ವಿಶ್ವನಾಥ ಅಡೆಕ್ಕಲ್ ಮಾತನಾಡಿದರು.
ಅಡೆಕ್ಕಲ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಿ.ಟಿ. ಅಬ್ಬಾಸ್, ಸದಸ್ಯರುಗಳಾದ ಸಂತೋಷ್ ಅಡೆಕ್ಕಲ್, ಬಿ.ಮುಹಮ್ಮದ್, ವಿನೋದ್ ಅಡೆಕ್ಕಲ್, ಬಿ.ಟಿ. ಹೈದರ್, ಝಕರಿಯಾ, ಜೀಪು ಚಾಲಕ ಮಾಲಕ ಸಂಘದ ಅನ್ನಿ ಪೂಜಾರಿ ನಾಗನಕೋಡಿ, ಹಮ್ಮಬ್ಬ ಅಡೆಕ್ಕಲ್, ಇಸ್ಮಾಯಿಲ್ ಎಸ್.ಕೆ., ಅಬ್ದುಲ್ಲಾ ಕೋಚಿಲ್ ಭಾಗವಹಿಸಿದ್ದರು.
ಪ್ರತಿಭಟನಾಕಾರರು ಮನವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರ ಮೂಲಕ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಯಿತು. ರಝಾಕ್ ಅಡೆಕ್ಕಲ್ ಸ್ವಾಗತಿಸಿ, ಉಮೇಶ್ ಸಿದ್ಯೊಟ್ಟು ವಂದಿಸಿದರು. ಉಪ್ಪಿನಂಗಡಿ ಎಸೈ ತಿಮ್ಮಪ್ಪ ನಾಯ್ಕ, ಎಎಸೈ ಚೆನ್ನಪ್ಪಗೌಡ, ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.







