ಭಟ್ಕಳ: ಶಿಕ್ಷಕಿಯರ ವರ್ಗಾವಣೆಗೆ ಒತ್ತಾಯಿಸಿ ಬಿಇಒ ಕಚೇರಿಗೆ ಮುತ್ತಿಗೆ

ಭಟ್ಕಳ, ಜೂ.25: ಕಳೆದ ಇಪ್ಪತ್ತು ವರ್ಷಗಳಿಂದ ಒಂದೇ ಶಾಲೇಯಲ್ಲಿ ಠಿಕಾಣಿ ಹೋಡಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣವನ್ನು ನೀಡದೆ ಪಾಲಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ, ಇಬ್ಬರು ಶಿಕ್ಷಕಿಯರನ್ನು ಕೂಡಲೇ ವರ್ಗಾಯಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಇಲ್ಲಿನ ಸಾಗರ್‌ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಅಪರೂಪದ ಘಟನೆ ಜರಗಿದೆ.
ತಾಲೂಕಿನ ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಮಂಗಳಾ ನಾಯಕ ಹಾಗೂ ಕಳೆದ 7 ವರ್ಷಗಳಿಂದ ಪದ್ಮಾ ನಾಯ್ಕ ಎಂಬ ಶಿಕ್ಷಕಿಯರು ಇಲ್ಲೇ ಠಿಕಾಣಿ ಹೂಡಿದ್ದು ಸರಿಯಾಗಿ ಪಾಠ ಮಾಡದೆ ನಿರ್ಲಕ್ಷ ತೋರುತ್ತಿದ್ದಾರೆ. ಮಕ್ಕಳೊಂದಿಗೆ ಹಾಗೂ ಪಾಲಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ಶಾಲಾ ಎಸ್‌ಡಿಎಂಸಿ ಸಮಿತಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.
ಪಾಲಕರೊಂದಿಗೆ ವಿದ್ಯಾರ್ಥಿಗಳೂ ಕೈಜೋಡಿಸಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಊರಿನ ನಾಗರಿಕರು ಕ್ಷೇತ್ರ ಶಿಕ್ಷಾಣಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಅರ್ಪಿಸಿದ್ದು, ಕೂಡಲೇ ಇಬ್ಬರು ಶಿಕ್ಷಕಿಯರನ್ನು ವರ್ಗಾಯಿಸಬೇಕು, ಇಲ್ಲದೆ ಹೋದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಬಿಇಒ ಕಚೇರಿಗೆ ಕಳುಹಿಸಬೇಕಾದೀತು ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.





