ಹಿಲರಿ ಭಾರತೀಯ ರಾಜಕಾರಣಿಗಳಿಂದ ಹಣ ಪಡೆದಿದ್ದಾರೆ : ಟ್ರಂಪ್ ಆರೋಪ

ವಾಶಿಂಗ್ಟನ್, ಜೂ. 25: ಭಾರತ ಮತ್ತು ಅಮೆರಿಕಗಳ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಬೆಂಬಲ ನೀಡಲು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ಭಾರತದ ರಾಜಕೀಯ ನಾಯಕರು ಮತ್ತು ಸಂಸ್ಥೆಗಳಿಂದ ಹಣೆ ಪಡೆದಿದ್ದಾರೆ ಎಂದು ಅವರ ರಿಪಬ್ಲಿಕನ್ ಎದುರಾಳಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಟ್ರಂಪ್ ಪ್ರಚಾರ ವಿಭಾಗವು ಈ ಆರೋಪಗಳನ್ನು 35 ಪುಟಗಳ ಪುಸ್ಕಿಕೆಯೊಂದರಲ್ಲಿ ಪ್ರಕಟಿಸಿದೆ. ಆದರೆ, ಈ ಆರೋಪಗಳ ಪೈಕಿ ಯಾವುದೂ ಹೊಸತಲ್ಲ. ಅವುಗಳು ಹಲವಾರು ವರ್ಷಗಳಿಂದ ಸಾರ್ವಜನಿಕವಾಗಿ ಕೇಳಿಬರುತ್ತಿದ್ದ ಆರೋಪಗಳೇ ಆಗಿದ್ದವು.
ಹಿಲರಿ ಈಗಾಗಲೇ ಹಲವು ಬಾರಿ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ.
ಪುಸ್ತಿಕೆಯಲ್ಲಿ ನೀಡಲಾದ ಮಾಹಿತಿಯು ನ್ಯೂಯಾರ್ಕ್‌ನಲ್ಲಿ ಈ ವಾರ ಹಿಲರಿಯ ದಾಖಲೆ ಕುರಿತಂತೆ ಟ್ರಂಪ್ ಮಾಡಿದ ಭಾಷಣದ ಆಯ್ದ ಅಂಶಗಳಾಗಿವೆ. ಟ್ರಂಪ್ ತನ್ನ ಭಾಷಣದಲ್ಲಿ ಹಿಲರಿಗೆ ಸಂಬಂಧಿಸಿದ 50 ಅಂಶಗಳ ಬಗ್ಗೆ ಮಾತನಾಡಿದ್ದರು.
‘ನ್ಯೂಯಾರ್ಕ್ ಟೈಮ್ಸ್’ನ ವರದಿಯೊಂದನ್ನು ಉಲ್ಲೇಖಿಸಿದ ಟ್ರಂಪ್ ಪ್ರಚಾರ ವಿಭಾಗ, 2008ರಲ್ಲೇ ಭಾರತೀಯ ರಾಜಕಾರಣಿ ಅಮರ್ ಸಿಂಗ್ ಕ್ಲಿಂಟನ್ ಫೌಂಡೇಶನ್‌ಗೆ 10 ಲಕ್ಷ ಮತ್ತು 50 ಲಕ್ಷ ಡಾಲರ್ ನಡುವಿನ ಮೊತ್ತವೊಂದನ್ನು ದೇಣಿಗೆ ನೀಡಿದ್ದರು ಎಂದು ಆರೋಪಿಸಿದೆ.
ನಾಗರಿಕ ಪರಮಾಣು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವುದಕ್ಕೆ ಸಂಬಂಧಿಸಿದ ಒಪ್ಪಂದದ ಪರವಾಗಿ ಲಾಬಿ ನಡೆಸಲು ಸಿಂಗ್ 2008 ಸೆಪ್ಟಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು ಹಾಗೂ ಒಪ್ಪಂದಕ್ಕೆ ಡೆಮಾಕ್ರಟರು ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬುದಾಗಿ ಅಂದಿನ ಸೆನೆಟರ್ ಕ್ಲಿಂಟನ್ ಆಶ್ವಾಸನೆ ನೀಡಿದ್ದರು ಎಂದು ಟ್ರಂಪ್ ಪ್ರಚಾರ ಆರೋಪಿಸಿದೆ.
2008ರಲ್ಲಿ ಭಾರತೀಯ ಉದ್ಯಮಗಳ ಒಕ್ಕೂಟವು ಕ್ಲಿಂಟನ್ ಫೌಂಡೇಶನ್‌ಗೆ 5 ಲಕ್ಷದಿಂದ 10 ಲಕ್ಷ ಡಾಲರ್‌ವರೆಗಿನ ಮೊತ್ತವನ್ನು ನೀಡಿತ್ತು ಎಂದಿದೆ.
ಹಿಲರಿಯ ಸಿಬ್ಬಂದಿ ಮುಖ್ಯಸ್ಥೆ ಶೆರಿಲ್ ಮಿಲ್ಸ್ ಹಿಲರಿಯ ಸೂಚನೆಯಂತೆ ಭಾರತೀಯ ಅಮೆರಿಕನ್ ರಾಜ್ ಫೆರ್ನಾಂಡೊರನ್ನು ವಿದೇಶಾಂಗ ಇಲಾಖೆಯ ಆಂತರಿಕ ಭದ್ರತಾ ಸಲಹಾ ಮಂಡಳಿಗೆ ನೇಮಿಸಿದ್ದರು ಎಂದು ಅದು ಆರೋಪಿಸಿದೆ.
ಫೆರ್ನಾಂಡೊ, ಕ್ಲಿಂಟನ್ ಫೌಂಡೇಶನ್‌ಗೆ 10 ಲಕ್ಷದಿಂದ 50 ಲಕ್ಷ ಡಾಲರ್‌ವರೆಗಿನ ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದರು.





