ಮಹಾಪತನ ಕಂಡ ಜಾಗತಿಕ ಶೇರು ಮಾರುಕಟ್ಟೆ
ಬ್ರೆಕ್ಸಿಟ್ ಜನಮತ ಎಫೆಕ್ಟ್

ನ್ಯೂಯಾರ್ಕ್,ಜೂ.25: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನ(ಬ್ರೆಕ್ಸಿಟ್) ಖಚಿತಗೊಂಡ ನಂತರ ಶುಕ್ರವಾರ ಜಾಗತಿಕ ಶೇರು ಮಾರುಕಟ್ಟೆಯು ಮಹಾಪತನಕ್ಕೆ ಸಾಕ್ಷಿಯಾಯಿತು. ಹೂಡಿಕೆದಾರರ ಸುಮಾರು ಎರಡು ಲಕ್ಷ ಕೋಟಿ ಡಾಲರ್ ಸಂಪತ್ತು ಕೆಲವೇ ಗಂಟೆಗಳಲ್ಲಿ ಅನಾಮತ್ತಾಗಿ ಕರಗಿಹೋದರೆ, ಬ್ರಿಟನ್‌ನ ಕರೆನ್ಸಿ ಸ್ಟರ್ಲಿಂಗ್ ಪೌಂಡ್ ಒಂದೇ ದಿನದಲ್ಲಿ 31 ವರ್ಷಗಳಲ್ಲಿ ದಾಖಲೆಯ ಕುಸಿತವನ್ನು ಕಂಡಿತು. ಬ್ರೆಕ್ಸಿಟ್ ಪರಿಣಾಮವಾಗಿ ಸುರಕ್ಷಿತ ಹೂಡಿಕೆಗಳಾದ ಚಿನ್ನ ಮತ್ತು ಸರಕಾರಿ ಬಾಂಡುಗಳಲ್ಲಿ ಹೂಡಿಕೆಯ ಪ್ರವಾಹವೇ ಹರಿದುಬಂದಿದೆ.
ಹೂಡಿಕೆದಾರರ ವಿಶ್ವಾಸಕ್ಕೆ ಬಿದ್ದಿರುವ ಭಾರೀ ಪೆಟ್ಟು ಮತ್ತು ಬ್ರೆಕ್ಸಿಟ್ ಮತದಾನದ ಅನಿಶ್ಚಿತತೆಯಿಂದಾಗಿ ಅಮೆರಿಕದ ಫೆಡರಲ್ ರಿಸರ್ವ್ ತಾನು ಈ ವರ್ಷ ಯೋಜಿಸಿದ್ದ ಬಡ್ಡಿದರ ಏರಿಕೆಯನ್ನು ಮುಂದೂಡಬಹುದು. ಪ್ರಮುಖ ಸೆಂಟ್ರಲ್ ಬ್ಯಾಂಕುಗಳು ತುರ್ತಾಗಿ ತಮ್ಮ ನೀತಿಗಳನ್ನು ಸಡಿಲಗೊಳಿಸಲೂ ಇದು ಕಾರಣವಾಗಬಹುದು ಎನ್ನುವುದು ಹಣಕಾಸು ಪಂಡಿತರ ಅಭಿಪ್ರಾಯ.
ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿಯೇ ಮುಂದುವರಿಯಲು ಜನಾಭಿಪ್ರಾಯ ಮೂಡಿಬರುವ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು ಆಘಾತಗೊಂಡಿದ್ದಾರೆ ಮತ್ತು ಇದು ಆಸ್ತಿಗಳ ಮರು ವೌಲ್ಯಮಾಪನಕ್ಕೂ ನಾಂದಿ ಹಾಡಿದೆ. ಬ್ರಿಟನ್‌ನ ನಿರ್ಧಾರ ಇನ್ನಷ್ಟು ದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ನಾಂದಿ ಹಾಡಬಹುದು ಮತ್ತು 28 ರಾಷ್ಟ್ರಗಳ ಐರೋಪ್ಯ ಒಕ್ಕೂಟ ಅಸ್ಥಿರಗೊಳ್ಳಬಹುದು ಎಂಬ ಹೂಡಿಕೆದಾರರಲ್ಲಿಯ ಭೀತಿ ಐರೋಪ್ಯ ರಾಷ್ಟ್ರಗಳ ಶೇರು ಮಾರುಕಟ್ಟೆಗಳು ತಳ ಕಚ್ಚುವಂತೆ ಮಾಡಿದೆ.
ಉನ್ನತ ಶ್ರೇಯಾಂಕದ ಸರಕಾರಿ ಸಾಲಪತ್ರಗಳು,ಜಪಾನಿನ ಯೆನ್ ಮತ್ತು ಚಿನ್ನ ದಲ್ಲಿ ಹೂಡಿಕೆ ಏರಿಕೆಯಾಗಿದೆ. ಫ್ರಾಂಕ್‌ಫರ್ಟ್ ಮತ್ತು ಪ್ಯಾರಿಸ್ ಶೇರು ಮಾರುಕಟ್ಟೆಗಳು ಶೇ.7 ಮತ್ತು ಶೇ.8ರಷ್ಟು ಕುಸಿತವನ್ನು ಕಂಡವು. ಇಟಲಿ ಮತ್ತು ಸ್ಪೇನ್‌ಗಳ ಶೇರು ಮಾರುಕಟ್ಟೆಗಳು ಶೇ.12ಕ್ಕೂ ಅಧಿಕ ಕುಸಿದಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟು ತೀವ್ರ ಪ್ರಮಾಣದಲ್ಲಿ ಪತನ ಕಂಡು ಬಂದಿದೆ. ಇಟಲಿಯ ಯುನಿಕ್ರೆಡಿಟ್ ಶೇ.24 ರಷ್ಟು ಮತ್ತು ಸ್ಪೇನಿನ ಬ್ಯಾಂಕೋ ಸ್ಯಾಂಟಾಂಡರ್ ಶೇ.20ರಷ್ಟು ಪತನ ಕಂಡಿವೆ.
ಆದರೆ ಸ್ಟರ್ಲಿಂಗ್ ವೌಲ್ಯದಲ್ಲಿ ಕುಸಿತ ಬ್ರಿಟನ್ನಿನ ಆರ್ಥಿಕತೆಗೆ ನೆರವಾಗಬಹುದೆಂಬ ಕೆಲವು ಹೂಡಿಕೆದಾರರ ಊಹಾಪೋಹದೊಂದಿಗೆ ಲಂಡನ್ನಿನ ಎಫ್‌ಟಿಎಸ್‌ಇ ಕುಸಿತ ಶೇ.3.2ಕ್ಕೆ ಸೀಮಿತಗೊಂಡಿದೆ.
ಆದರೂ ಬ್ರಿಟನ್ನಿನ ಪ್ರಮುಖ ಬ್ಯಾಂಕುಗಳ ಮಾರುಕಟ್ಟೆ ವೌಲ್ಯ 100 ಶತಕೋಟಿ ಡಾ.ಗಳನ್ನು ಕಳೆದುಕೊಂಡಿದೆ. ಲಾಯ್ಡ್ಸೆ,ಬಾರ್ಕ್ಲೇಸ್ ಮತ್ತು ಆರ್‌ಬಿಎಸ್ ಶೇರುಗಳು ಶೇ.30ರಷ್ಟು ಇಳಿಕೆ ಕಂಡಿದ್ದರೂ ಬಳಿಕ ಈ ಹಾನಿಯಲ್ಲಿ ಅರ್ಧದಷ್ಟನ್ನು ಸರಿದೂಗಿಸಿಕೊಂಡಿವೆ.
ವಾಲ್ ಸ್ಟ್ರೀಟ್‌ನಲ್ಲಿ ಶೇರುಗಳ ಬೆಲೆಗಳು ಸರಾಸರಿ ಶೇ.3ರಷ್ಟು ಕುಸಿದಿದ್ದು,ಡೋ ಜೋನ್ಸ್ ಇಂಡಸ್ಟ್ರಿಯಲ್ 544 ಅಂಶಗಳನ್ನು ಕಳೆದುಕೊಂಡಿದೆ. ಎಸ್ ಆ್ಯಂಡ್‌ಪಿ 500 67.75, ನಾಸ್ಡಾಕ್ ಕಂಪೋಸಿಟ್ 182.46 ಅಂಶಗಳ ಇಳಿಕೆ ಕಂಡಿವೆ. ಡಾಲರ್‌ನೆದುರು 1.3228 ಮತ್ತು 1.5022ರ ನಡುವೆ ಹೊಯ್ದಾಡುತ್ತಿದ್ದ ಸ್ಟರ್ಲಿಂಗ್ ಅಂತಿಮವಾಗಿ 1.3775 ರಲ್ಲಿ ನೆಲೆಗೊಂಡಿದೆ. ಅದು ಶೇ.7.4ರಷ್ಟು ವೌಲ್ಯ ಕಳೆದುಕೊಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅಗತ್ಯವಾದರೆ ನಗದು ಹರಿವಿಗೆ ತಾವು ಸಿದ್ಧ ಎಂದು ಬ್ಯಾಂಕ್ ಆಫ್ ಇಂಗ್ಲಂಡ್,ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಪೀಪಲ್ಸ್ ಬ್ಯಾಂಕ್ ಆಫ್ ಚೈನಾ ಹೇಳಿವೆ.







